ಬಳ್ಳಾರಿ: ಮಹಾನಗರ ಪಾಲಿಕೆ ಕಾಂಗ್ರೆಸ್ ತೆಕ್ಕೆಗೆ
ಬಳ್ಳಾರಿ: ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ಲಭಿಸಿದ್ದು, ಬಿಜೆಪಿ ಹಿನ್ನಡೆ ಅನುಭವಿಸಿದೆ. ಕಾಂಗ್ರೆಸ್ ಟಿಕೆಟ್ ದೊರಕದೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ಐವರು ಕೂಡ ಪಾಲಿಕೆಯ ಮೆಟ್ಟಿಲು ಹತ್ತಿದ್ದಾರೆ.
39 ವಾರ್ಡ್ಗಳಲ್ಲಿ ಕಾಂಗ್ರೆಸ್ 21 ಕಡೆಗಳಲ್ಲಿ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. 13 ಸ್ಥಾನಗಳನ್ನು ಗಳಿಸಿರುವ ಬಿಜೆಪಿ ವಿರೋಧ ಪಕ್ಷದ ಸ್ಥಾನಕ್ಕಷ್ಟೇ ತಳ್ಳಲ್ಪಟ್ಟಿದೆ. ಮತ ಎಣಿಕೆಯ ಉದ್ದಕ್ಕೂ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿ ಗಮನ ಸೆಳೆದರು.
ಸಚಿವ ಬಿ.ಶ್ರೀರಾಮುಲು, ಶಾಸಕ ಜಿ.ಸೋಮಶೇಖರ ರೆಡ್ಡಿ ಅವರ ನಿರಂತರ ಭಾರೀ ಪ್ರಚಾರದ ಬಳಿಕವೂ ಬಿಜೆಪಿಯು ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಆಗದೆ ಸೋಲಿನ ರುಚಿ ಕಂಡರು.
ಶಾಸಕ ಪುತ್ರನಿಗೆ ಮುಖಭಂಗ : 18ನೇ ವಾರ್ಡ್ನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಶಾಸಕ ಜಿ.ಸೋಮಶೇಖರ ರೆಡ್ಡಿ ಪುತ್ರ ಜಿ.ಶ್ರವಣಕುಮಾರ್ ರೆಡ್ಡಿ ಅವರು ಕಾಂಗ್ರೆಸ್ ಅಭ್ಯರ್ಥಿ ಎಂ,ನಂದೀಶ್ ಎದುರು ಕೇವಲ 133 ಮತಗಳ ಅಂತರದಿಂದ ಸೋತರು. ಶಾಸಕ ರೆಡ್ಡಿ ಈ ಚುನಾವಣೆಯನ್ನು ತಮ್ಮ ಪ್ರತಿಷ್ಠೆಯ ಕಣವನ್ನಾಗಿ ಪರಿಗಣಿಸಿ ಹಗಲು–ರಾತ್ರಿ ನಿರಂತರ ಪ್ರಚಾರ ನಡೆಸಿದ್ದರು.