ಉಡುಪಿ: ಲಸಿಕೆ ಪಡೆಯಲು ಮುಗಿಬಿದ್ದ ಜನತೆ-ಲಸಿಕೆ ಕೊರತೆ, ನಾಗರಿಕರ ಅಸಮಾಧಾನ
ಉಡುಪಿ, ಎ.29: ಜಿಲ್ಲೆಯಲ್ಲಿ ಒಂದೆಡೆ ದಿನೇ ದಿನೇ ಏರುತ್ತಿರುವ ಕೊರೋನ ಸೋಂಕಿತರ ಸಂಖ್ಯೆ ಜನರಲ್ಲಿ ಆತಂಕ ಸೃಷ್ಟಿಸುತ್ತಿದ್ದರೆ ಮತ್ತೊಂದೆಡೆ ಕೋವಿಡ್ ಲಸಿಕೆಯ ಕೊರತೆಯೂ ಇನ್ನಷ್ಟು ಭೀತಿ ಹೆಚ್ಚಿಸಿದೆ. ಕೋವಿಡ್ ನಿಯಂತ್ರಣಕ್ಕೆ ಲಸಿಕೆ ಅಗತ್ಯವಾಗಿರುವುದರಿಂದ ಲಸಿಕೆ ಪಡೆಯುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ.
ಗುರುವಾರ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಲಸಿಕೆ ಪಡೆಯಲು 200-300 ಮಂದಿ ಜಮಾಯಿಸಿದ್ದರು. ಆದರೆ ಆಸ್ಪತ್ರೆಗೆ ಕೇವಲ 80 ಡೋಸ್ ಮಾತ್ರ ಪೂರೈಕೆಯಾಗಿರುವುದರಿಂದ ನೂರಾರು ಮಂದಿ ಲಸಿಕೆ ಸಿಗದೆ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಆಸ್ಪತ್ರೆಗೆ ಲಸಿಕೆ ಪಡೆಯಲು ಬರುವ 200-300 ಮಂದಿಯಲ್ಲಿ 80 ಮಂದಿಗೆ ಟೋಕನ್ ನೀಡುವುದೇ ಸಿಬ್ಬಂದಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತು. ವೈದ್ಯಾಧಿಕಾರಿಗಳು ಮನದಟ್ಟು ಮಾಡಿದರೂ ಜನ ಸಮಾಧಾನ ಆಗಿರಲಿಲ್ಲ. ಇದರಿಂದ ಆಸ್ಪತ್ರೆಯ ಆವರಣದಲ್ಲಿ ಗದ್ದಲ, ಗಲಾಟೆ ಕೇಳಿಬಂದವು. ಬಳಿಕ ಟೋಕನ್ ಪಡೆದ ಕೇವಲ 80 ಮಂದಿಗೆ ಮಧ್ಯಾಹ್ನದ ಒಳಗೆ ಲಸಿಕೆಯನ್ನು ನೀಡಲಾಯಿತು.
ಈ ಬಗ್ಗೆ ಜಿಲ್ಲಾ ಸರ್ಜನ್ ಡಾ.ಮಧುಸೂದನ್ ಅವರು ಪ್ರತಿಕ್ರಿಯೆ ನೀಡಿ, ಇಂದು ಕೂಡ ಲಸಿಕೆ ಕಡಿಮೆ ಬಂದ ಕಾರಣ ಸಮಸ್ಯೆಯಾಗಿದೆ. ನಾಳೆ 500 ಡೋಸ್ ನೀಡುವಂತೆ ಆರೋಗ್ಯ ಇಲಾಖೆಗೆ ತಿಳಿಸಿದ್ದೇವೆ. ನಾಳೆ ಎಷ್ಟು ಬರುತ್ತದೆ ಅಷ್ಟು ಲಸಿಕೆಯನ್ನು ನೀಡುತ್ತೇವೆ. ಜನ ಇಂದು ಕೊರೋನ ಭೀತಿಯಿಂದ ಲಸಿಕೆ ಪಡೆಯಲು ಬರುತ್ತಿರುವುದರಿಂದ ತೊಂದರೆ ಆಗುತ್ತಿದೆ’ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಪ್ರತಿಕ್ರಿಯೆ ನೀಡಿ, ಪ್ರತಿದಿನ ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ನಾವು ಸರಕಾರದಿಂದ ಬಂದ ಲಸಿಕೆಯನ್ನು ಜಿಲ್ಲೆಯಾದ್ಯಂತ ಹಂಚಿ ನೀಡುತ್ತಿದ್ದೇವೆ. ಈಗ ಬೆಂಗಳೂರಿನಿಂದ ಪ್ರತಿದಿನ ಲಸಿಕೆಯನ್ನು ಪೂರೈಕೆ ಮಾಡಲಾಗುತ್ತಿದೆ. ಮೊನ್ನೆ 5000, ನಿನ್ನೆ 12 ಸಾವಿರ ಮತ್ತು ಇಂದು 10 ಸಾವಿರ ಲಸಿಕೆ ಪೂರೈಕೆ ಮಾಡಲಾಗಿದೆ. ಕೊರೋನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಸಿಕೆಗೆ ಬೇಡಿಕೆ ಕೂಡ ಹೆಚ್ಚಾಗುತ್ತಿದೆ.
‘ಕೆಲವು ಸಮಯದಿಂದ ಉಡುಪಿ ಜಿಲ್ಲೆಗೆ ಕೋವ್ಯಾಕ್ಸಿನ್ ಲಸಿಕೆ ಬರುತ್ತಿಲ್ಲ. ಆ ಬಗ್ಗೆ ಇಂದು ನಡೆದ ಪ್ರಧಾನ ಮಂತ್ರಿ ಹಾಗೂ ಅಧಿಕಾರಿಗಳ ವಿಡಿಯೋ ಕಾನ್ಫರೆನ್ಸ್‌ನಲ್ಲಿ ತಿಳಿಸಿದ್ದೇವೆ. ಪೂರೈಕೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಎರಡನೆ ಡೋಸ್ ಪಡೆಯಲು ಬರುತ್ತಿರುವವರಿಗೆ ಮನದಟ್ಟು ಮಾಡಿ ವಾಪಾಸ್ಸು ಕಳುಹಿಸಿದ್ದೇವೆ. ಮುಂದೆ ಬಂದ ತಕ್ಷಣ ಅವರಿಗೆ ಲಸಿಕೆ ನೀಡಲಾಗುವುದು’ ಎಂದು ತಿಳಿಸಿದ್ದಾರೆ.