ಕೋಟ: ಅರಣ್ಯ ರಕ್ಷಕನ ಮನೆಗೆ ಕನ್ನ ಹಾಕಿದ ಖದೀಮರು!
ಕೋಟ ಎ.29 (ಉಡುಪಿ ಟೈಮ್ಸ್ ವರದಿ): ಅರಣ್ಯ ಇಲಾಖೆಯ ಸರಕಾರಿ ವಸತಿಗೃಹದಲ್ಲಿ ಕಳ್ಳತನ ನಡೆದಿರುವ ಘಟನೆ ಶಿರಿಯಾರ ಗ್ರಾಮದ ಕುದ್ರು ಕಟ್ಟೆಯಲ್ಲಿ ನಡೆದಿದೆ.ವಲಯದ ಅರಣ್ಯ ರಕ್ಷಕ ರವೀಂದ್ರ ಅವರ ವಸತಿ ಗೃಹದಲ್ಲಿ ಕಳ್ಳತನ ನಡೆದಿದೆ.
ಇವರು, ಶಂಕರನಾರಾಯಣ ವಲಯದ ಅರಣ್ಯ ರಕ್ಷಕರಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು ಶಿರಿಯಾರ ಗ್ರಾಮದ ಕುದ್ರು ಕಟ್ಟೆ ಯಲ್ಲಿರುವ ಅರಣ್ಯ ಇಲಾಖೆಯ ಸರಕಾರಿ ವಸತಿ ಗೃಹದಲ್ಲಿ ವಾಸ್ತವ್ಯ ಮಾಡಿಕೊಂಡಿದ್ದರು. ತಮ್ಮ ಸಹೋದರನ ಮದುವೆಗೆಂದು ರಜೆಯಲ್ಲಿ ಹೋದವರು ಎ. 26 ರಂದು ಮಧ್ಯಾಹ್ನ ಅಗತ್ಯ ಕಾರ್ಯದ ನಿಮಿತ್ತ ವಸತಿ ಗೃಹಕ್ಕೆ ಬಂದು ವಾಪಾಸ್ಸು ತೆರಳಿದ್ದರು. ಬಳಿಕ ಎ. 28 ರಂದು ಕರ್ತವ್ಯಕ್ಕೆ ಮರಳಿ ಬಂದವರು ಬೆಳಿಗ್ಗೆ ವಸತಿ ಗೃಹಕ್ಕೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ತಿಳಿದು ಬಂದಿದೆ. ವಸತಿ ಗೃಹದ ಹಿಂಬದಿ ಬಾಗಿಲು ಒಡೆದು ಒಳ ನುಗ್ಗಿದ ಕಳ್ಳರು ಕೋಣೆಯಲ್ಲಿ ದ್ದ ಮೇಜಿನ ಡ್ರಾಯರ್ ಒಡೆದು ಹಾಕಿ, ಅದರಲ್ಲಿ ಇಟ್ಟಿದ್ದ, 75,000 ರೂ. ಕಳವು ಮಾಡಿ ಪರಾರಿಯಾಗಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.