ನಾಪತ್ತೆಯಾಗಿದ್ದ ಮೀನುಗಾರಿಕಾ ಬೋಟ್ ಪತ್ತೆ ಹಚ್ಚಿದ ಕೋಸ್ಟ್ ಗಾರ್ಡ್- 11 ಮಂದಿ ಸುರಕ್ಷಿತ
ಮಂಗಳೂರು, ಎ 29: ಕೇರಳದ ಪಶ್ಚಿಮ ಮೀನುಗಾರಿಕಾ ಧಕ್ಕೆಯಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿದ್ದ ತಮಿಳುನಾಡು ಮೂಲದ ಮೀನುಗಾರಿಕಾ ಬೋಟ್ ನ್ನು ಪತ್ತೆ ಹಚ್ಚಿದ ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ಬೋಟ್ ನಲ್ಲಿದ್ದ 11 ಮಂದಿ ಮೀನುಗಾರರು ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾರೆ.
ಎ.6 ರಂದು ಮರ್ಸಿಡಿಸ್ ಹೆಸರಿನ ಈ ಬೋಟ್ ನಲ್ಲಿ 11 ಮಂದಿ ಮೀನುಗಾರರು 30 ದಿನಗಳ ಪ್ರಯಾಣಕ್ಕಾಗಿ ತೆರಳಿದ್ದರು. ಬಳಿಕ ಬೋಟ್ ನ ಸಂಪರ್ಕ ಕಡಿದುಕೊಂಡಿತ್ತು. ಇದೀಗ ಲಕ್ಷ ದ್ವೀಪದಿಂದ ಸುಮಾರು 200 ಮೈಲಿ ದೂರದಲ್ಲಿ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ಬೋಟ್ ನ್ನು ಪತ್ತೆಹಚ್ಚಿದ್ದಾರೆ. ಅಲ್ಲದೆ ಬೋಟ್ ನಲ್ಲಿದ್ದ ಎಲ್ಲಾ 11 ಮೀನುಗಾರರನ್ನು ನವಮಂಗಳೂರು ಬಂದರಿನ ಮೂಲಕ ಕರೆತಂದು ಕೋಸ್ಟ್ ಗಾರ್ಡ್ , ಸಂಬಂಧಪಟ್ಟವರಿಗೆ ಹಸ್ತಾಂತರಿಸಲಿದೆ ಎಂದು ತಿಳಿದು ಬಂದಿದೆ. ಕೆಲ ದಿನಗಳ ಹಿಂದೆ ಮರ್ಸಿಡಿಸ್ನ್ನೇ ಹೋಲುವ ಬೋಟ್ನ ಅವಶೇಷಗಳು ಬಂಗಾಳ ಕೊಲ್ಲಿಯಲ್ಲಿ, ಗೋವಾ ಕರಾವಳಿಯಿಂದ 110 ಕಿ.ಮೀ. ದೂರದ ಸಮುದ್ರದಲ್ಲಿ ಪತ್ತೆಯಾಗಿತ್ತು. ಹಾಗಾಗಿ ಮರ್ಸಿಡಿಸ್ ಮುಳುಗಿ ಅದರಲ್ಲಿದ್ದ ಎಲ್ಲ ಮೀನುಗಾರರು ಜಲಸಮಾಧಿಯಾಗಿರುವ ಶಂಕೆ ವ್ಯಕ್ತವಾಗಿತ್ತು.
ಇದೀಗ ಕರಾವಳಿ ರಕ್ಷಣಾ ಪಡೆ (ಐಸಿಜಿ) ಮತ್ತು ಭಾರತೀಯ ನೌಕಾಪಡೆಯ ಸಾಗರದಲ್ಲಿ ನಡೆಸಿದ ಸತತ ಶೋಧ ಕಾರ್ಯದ ಬಳಿಕ ನಡೆಸಿತ್ತು. ಇದೀಗ ಮರ್ಸಿಡಿಸ್ ಲಕ್ಷ ದ್ವೀಪದಿಂದ ಸುಮಾರು 200 ಮೈಲಿ ದೂರದಲ್ಲಿ ಪತ್ತೆಯಾಗಿದ್ದು ಹಡಗಿನಲ್ಲಿದ್ದ ಎಲ್ಲಾ ಮೀನುಗಾರರು ಸುರಕ್ಷಿತರಾಗಿದ್ದಾರೆ. ಅವರನ್ನು ದಡಕ್ಕೆ ಕರೆತರಲಾಗುತ್ತಿದೆ. ಮೇ. 3 ರ ರಂದು ಬೋಟ್ ದಡಕ್ಕೆ ತಲುಪಬಹುದು ಎಂದು ಐಸಿಜಿ ಪ್ರಕಟಣೆ ಯಲ್ಲಿ ತಿಳಿಸಿದೆ.