ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್: ಕಲಾವಿದರಿಗೆ ಉಚಿತವಾಗಿ ರೇಷನ್ ಮನೆಬಾಗಿಲಿಗೆ

ಉಡುಪಿ ಎ.28(ಉಡುಪಿ ಟೈಮ್ಸ್ ವರದಿ): ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್  ಮಂಗಳೂರು ಇದರ ವತಿಯಿಂದ ಯಕ್ಷ ಕಲಾವಿದರಿಗೆ ಉಚಿತ ರೇಷನ್ ವಿತರಣೆ ಮಾಡುವುದಾಗಿ ತಿಳಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್  ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ‌ಕೆ. ಪುರುಷೋತ್ತಮ ಭಂಡಾರಿ ಅಡ್ಯಾರ್ ಅವರು , ಕೊರೋನಾದಿಂದ ಕಳೆದ ವರ್ಷ ಯಕ್ಷಗಾನ ಕಲಾವಿದರು  ತತ್ತರಿಸಿ ಹೋಗಿದ್ದರು. ಈ ವರ್ಷವೂ ಈಗಾಗಲೇ ಜಾರಿಯಾಗಿರುವ ಲಾಕ್‌ಡೌನ್‌ನಿಂದಾಗಿ ಮೇಳದ ತಿರುಗಾಟವೂ ಇಲ್ಲದೆ ಮತ್ತು ಮುಂದಿನ 4-5 ತಿಂಗಳು ಕಾರ್ಯಕ್ರಮವೂ ಇಲ್ಲದೇ ಯಾರಲ್ಲೂ ಹೇಳಿಕೊಳ್ಳಲಾಗದ ಪರಿಸ್ಥಿತಿಯಲ್ಲಿದ್ದಾರೆ. 

ಯಕ್ಷಗಾನ ಕಲಾವಿದರ ಈ ಪರಿಸ್ಥಿತಿಯನ್ನು ಮನಗಂಡು ಯಕ್ಷಗಾನ ಕ್ಷೇತ್ರದ ವೃತ್ತಿ ಕಲಾವಿದರ ಕುಟುಂಬ ಹಸಿವಿನಿಂದ ಬಳಲಬಾರದು ಎಂಬ ಸದುದ್ದೇಶದಿಂದ ಕಳೆದ ವರ್ಷದಂತೆ ಈ ಬಾರಿಯೂ ಪಟ್ಲ ಫೌಂಡೇಶನ್ ಮಂಗಳೂರು ವತಿಯಿಂದ ತೀರಾ ಕಷ್ಟದಲ್ಲಿರುವ ಯಕ್ಷಗಾನ ಕಲಾವಿದರಿಗೆ ಉಚಿತವಾಗಿ ರೇಷನ್ ಸಾಮಾಗ್ರಿಗಳನ್ನು ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಿದೆ. ಈ ಹಿನ್ನಲೆಯಲ್ಲಿ ಅತೀ ಅವಶ್ಯಕತೆಯಿರುವ ಯಕ್ಷಗಾನ ವೃತ್ತಿ ಕಲಾವಿದರು ದೂರವಾಣಿ ಸಂಖ್ಯೆ: 9164521588, 7411161662 ನ್ನು ಸಂಪರ್ಕಿಸಿ ತಮ್ಮ ಹೆಸರು, ವಿಳಾಸ ಹಾಗೂ ಮೇಳದ ಹೆಸರನ್ನು  ಮೇ 10ರ ಒಳಗೆ  ನೋಂದಾಯಿಸಿಕೊಳ್ಳಬಹುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!