ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ: ಬಸ್ರೂರು ಶಾಖೆಯ ನೂತನ ಸ್ವಂತ ಕಟ್ಟಡ ಉದ್ಘಾಟನೆ
ಕುಂದಾಪುರ,ಎ.27: (ಉಡುಪಿ ಟೈಮ್ಸ್ ವರದಿ)ಜಿಲ್ಲೆಯ ಪ್ರಸಿದ್ಧ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಬಸ್ರೂರು ಶಾಖೆಯ ನೂತನ ಸ್ವಂತ ಕಟ್ಟಡ ಉದ್ಘಾಟನಾ ಸಮಾರಂಭ ಇಂದು ಬಸ್ರೂರಿನ ರೋಜರಿ ಕ್ರೌನ್ ನಲ್ಲಿ ನಡೆಯಿತು. ಸೊಸೈಟಿಯ ನೂತನ ಕಟ್ಟಡವನ್ನು ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾದ ಅ|ವಂ| ಸ್ಟ್ಯಾನಿ ತಾವ್ರೊ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ದೇವರು ಎಲ್ಲರಿಗೂ ತನ್ನದೇ ಆದ ಪ್ರತಿಭೆಯನ್ನು ಕೊಟ್ಟಿದ್ದಾನೆ, ಅದನ್ನು ನಾವು ಉರ್ಜಿತಗೊಳಿಸಿಕೊಳ್ಳ ಬೇಕು, ಇದನ್ನು ರೋಜರಿ ಕ್ರೇಡಿಟ್ ಕೋ ಆಪರೇಟಿವ್ ಸಂಸ್ಥೆ ಮಾಡಿ ತೋರಿಸಿದೆ. ಬೈಬಲಲ್ಲಿ ಹೇಳಿದ ಹಾಗೇ ಧನಿ ತಮಗೆ ನೀಡಿದ ದೇಣಿಗೆಯನ್ನು ಸುಮ್ಮನೇ ಕೂಡಿಡದೆ, ಅದನ್ನು ಮತ್ತಷ್ಟು ಹೆಚ್ಚು ಪಡೆಯಲು ಶ್ರಮ ಪಡಬೇಕು, ಅದರಂತೆ ರೋಜರಿ ಸೊಸೈಟಿಯ ಅಧ್ಯಕ್ಷರು, ನಿರ್ದೇಶಕರು, ಸಿಬ್ಬಂದಿ ವರ್ಗ ಶ್ರಮಿಸಿದೆ, ಹೀಗಾಗಿ ಬಹಳಷ್ಟು ಪ್ರಗತಿ ಸಾಧಿಸುತ್ತಾ, ಅವರ ಶಾಖೆಗಳಿಗೆ ಸ್ವಂತ ಕಟ್ಟಡವನ್ನು ಕಟ್ಟಲಿಕ್ಕೆ ಸಾಧ್ಯವಾಗಿದೆ, ಸಂಸ್ಥೆ ಇನ್ನಷ್ಟು ಅಭಿವೃದ್ದಿ ಹೊಂದಲಿ ಮತ್ತು ಸಮಾಜದ ಸೇವೆ ಮಾಡಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಬಸ್ರೂರು ಸಂತ ಫಿಲಿಪ್ ನೇರಿ ಚರ್ಚಿನ ಧರ್ಮಗುರು ವಂ|ಚಾಲ್ರ್ಸ್ ನೊರೊನ್ಹಾ ಆಶಿರ್ವಚನ ನೀಡಿದರು.
ಈ ವೇಳೆ ರೋಜರಿ ಸೊಸೈಟಿಯ ಅಧ್ಯಕ್ಷ ಜೋನ್ಸನ್ ಡಿ ಆಲ್ಮೇಡಾ ಅವರು ಮಾತನಾಡಿ, ದೂರದರ್ಶಿತ್ವ ಇಟ್ಟುಕೊಂಡು ನಮ್ಮ ಹಿರಿಯವರಾದ ಕುಂದಾಪುರ ವಲಯ ಕಥೊಲಿಕ್ ಸಭೆಯ ಮೂಲಕ ಸ್ಥಾಪಿಸಲ್ಪಟ್ಟ ಈ ಸಂಸ್ಥೆ ಅಲ್ಪ ಮೊತ್ತದೊಂದಿಗೆ ಆರಂಭಗೊಂಡು, ಸಂಸ್ಥೆಯ ಆಡಳಿತ ಮಂಡಳಿಯ ಉತ್ತಮ ಆಡಳಿತದಿಂದ ಇಂದು ಈ ಸೊಸೈಟಿಯಲ್ಲಿ ಸುಮಾರು 83 ಕೋಟಿ ರೂಪಾಯಿ ಸಾಲದ ಮುOಗಡ ಹಣ ಮತ್ತು 106 ಕೋಟಿಗಿಂತಲೂ ಹೆಚ್ಚು ಠೇವಣಿ ಹಣ ಇದೆ, ಮುಂದೆ ನಮ್ಮ ಎಲ್ಲಾ ಶಾಖೆಗಳಿಗೆ ಸ್ವಂತ ಕಟ್ಟಡ ಕಟ್ಟುವ ಯೋಚನೆ ಹಮ್ಮಿಕೊಂಡಿದ್ದೇವೆ, ಜೊತೆಗೆ ನಿರ್ದೇಶಕರ ಮತ್ತು ಸಿಬ್ಬಂದಿಯ ಸಹಕಾರದೊಂದಿಗೆ ಸೊಸೈಟಿ ಇನ್ನೂ ಹೆಚ್ಚಿನ ಅಭಿವೃದ್ದಿ ಹೊಂದಲು ಶ್ರಮಿಸುತ್ತೇವೆ ಎಂದರು.
ಬಸ್ರೂರು ಶಾಖಾ ಸಭಾಪತಿ ಫಿಲಿಪ್ ಡಿಕೋಸ್ತಾ ಖಜಾನೆ ಹಾಗೂ ಉಪಾಧ್ಯಕ್ಷ ಕಿರಣ್ ಲೋಬೊ ಗಣಕ ಯಂತ್ರ ಉದ್ಘಾಟಿಸಿದರು. ಈ ಸಂದರ್ಭ ಸೊಸೈಟಿಯ ನಿರ್ದೇಶಕಿ ಶಾಂತಿ ಕರ್ವಾಲ್ಲೊ, ಸೊಸೈಟಿಯ ಪ್ರಧಾನ ಕಾರ್ಯನಿರ್ವಹಣಾಧಿಕಾರಿ ಪಾಸ್ಕಲ್ ಡಿಸೋಜಾ, ಕಟ್ಟಡದ ಇಂಜಿನಿಯರ್ ರವೀಂದ್ರ ಕಾವೇರಿ, ಕಾಂಟ್ರ್ಯಾಕ್ಟರ್ ಶ್ರೀಕಾಂತ್, ಕಟ್ಟಡ ಕಟ್ಟಲು ಸಹಕರಿಸಿದ ಪ್ರದೀಪ್ ಕೊತಾ, ಸಮಾಜ ಸೇವಕ ದೇವಿಡ್ ಸಿಕ್ವೇರಾ, ಸೊಸೈಟಿಯ ನಿರ್ದೇಶಕ ವಿನೋದ್ ಕ್ರಾಸ್ಟೊ, ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಮೇಬಲ್ ಡಿಆಲ್ಮೇಡಾ ಮುಂತಾದ ಕೆಲವೇ ಗಣ್ಯರು ಮತ್ತು ಸಿಬ್ಬಂದಿ ಹಾಜರಿದ್ದರು.