ಕರ್ಫ್ಯೂ ಜಾರಿ: ಖಾಸಗಿ ಬಸ್‌ ಗಳಿಂದ ಏಕಾಏಕಿ ಪ್ರಯಾಣ ದರ ಮೂರು ಪಟ್ಟು ಏರಿಕೆ!

ಬೆಂಗಳೂರು: ಕರ್ಫ್ಯೂ ಜಾರಿಯಾಗಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್‌ ಕಂಪನಿಗಳು, ಏಕಾಏಕಿ ಪ್ರಯಾಣ ದರವನ್ನೂ ಮೂರು ಪಟ್ಟು ಏರಿಕೆ ಮಾಡಿವೆ.

ಸೋಮವಾರ ಮಧ್ಯಾಹ್ನದವರೆಗೆ ಸಾಮಾನ್ಯ ಪ್ರಯಾಣ ದರವೇ ಇತ್ತು. ಆದರೆ, ಕರ್ಫ್ಯೂ ಘೋಷಣೆಯಾಗುತ್ತಿದ್ದಂತೆ ಪ್ರಯಾಣ ದರವನ್ನೂ ಹೆಚ್ಚಿಸಲಾಗಿದೆ. ಆನ್‌ಲೈನ್‌ ಮೂಲಕ ಸೀಟುಗಳ ಬುಕ್ಕಿಂಗ್ ಆರಂಭವಾಗಿದೆ. ಊರಿಗೆ ಹೋಗಲು ಸಿದ್ಧವಾಗಿರುವವರು ಅನಿವಾರ್ಯವಾಗಿಯೇ ದುಬಾರಿ ದರವನ್ನೇ ಕೊಟ್ಟು ಸೀಟು ಕಾಯ್ದಿರಿಸಿದ್ದಾರೆ.

ಬೆಂಗಳೂರಿನಿಂದ ಹುಬ್ಬಳ್ಳಿ–ಧಾರವಾಡ, ಬೆಳಗಾವಿ, ಕಲಬುರ್ಗಿ, ವಿಜಯಪುರ, ಮಂಗಳೂರು ಸೇರಿದಂತೆ ಹಲವು ನಗರಗಳಿಗೆ ಹೋಗುವ ಖಾಸಗಿ ಬಸ್‌ಗಳ ದರದಲ್ಲಿ ಏರಿಕೆಯಾಗಿದೆ.

ಸಾಮಾನ್ಯ ದಿನಗಳಲ್ಲಿ ಎ.ಸಿ ಹಾಗೂ ನಾನ್ ಎ.ಸಿ ಬಸ್‌ಗಳಿಗೆ ಅನುಗುಣವಾಗಿ ₹ 450ರಿಂದ ₹ 1,200 ಪ್ರಯಾಣ ದರವಿರುತ್ತಿತ್ತು. ಆದರೆ, ಸೋಮವಾರ ಕನಿಷ್ಠ ₹1,399ರಿಂದ ₹3619 ಆಗಿದೆ.

ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ದರ ಏರಿಕೆ ಮಾಡುವುದು ಖಾಸಗಿ ಕಂಪನಿಗಳಿಗೆ ರೂಢಿಯಾಗಿತ್ತು. ಇದೀಗ ಕರ್ಫ್ಯೂವನ್ನೂ ಕಂಪನಿಗಳು ಬಂಡವಾಳ ಮಾಡಿಕೊಂಡಿವೆ. ಅಕ್ರಮವಾಗಿ ಪ್ರಯಾಣ ದರ ಹೆಚ್ಚಿಸಿ, ಜನರಿಂದ ಸುಲಿಗೆ ಮಾಡುತ್ತಿವೆ’ ಎಂದು ಪ್ರಯಾಣಿಕರು ದೂರಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಖಾಸಗಿ ಬಸ್ ಕಂಪನಿಯೊಂದರ ಪ್ರತಿನಿಧಿ, ‘ಇಂದು ಮಾತ್ರ ಬಸ್ ಓಡಿಸಲು ಅವಕಾಶವಿದೆ. ನಂತರ, 14 ದಿನ ಬಸ್‌ಗಳನ್ನು ನಿಂತಲೇ ನಿಲ್ಲಿಸಬೇಕು. ಆರ್ಥಿಕವಾಗಿ ಸಾಕಷ್ಟು ಕಷ್ಟ ಅನುಭವಿಸಬೇಕಾಗುತ್ತದೆ. ಅದೇ ಕಾರಣಕ್ಕೆ ದರ ಏರಿಕೆ ಮಾಡಿದ್ದೇವೆ. ಜನರೂ ಬುಕ್ಕಿಂಗ್ ಮಾಡುತ್ತಿದ್ದಾರೆ’ ಎಂದರು.

Leave a Reply

Your email address will not be published. Required fields are marked *

error: Content is protected !!