ರಾಜ್ಯದಲ್ಲಿ 14 ದಿನ ಕೋವಿಡ್ ಕರ್ಫ್ಯೂ -ಏನಿರುತ್ತೆ? ಏನಿರುವುದಿಲ್ಲ? ವಿವರ ಇಲ್ಲಿದೆ
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಭಾರೀ ಸಂಖ್ಯೆಯಲ್ಲಿ ಹೆಚ್ಚುತ್ತಿದ್ದು, ಸೋಂಕಿನ ಹರಡುವಿಕೆಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ 14 ದಿನ ಕೋವಿಡ್ ಕರ್ಫ್ಯೂ ಜಾರಿ ಮಾಡಿದೆ. ಹಾಗಾದರೆ ಈ ಅವಧಿಯಲ್ಲಿ ಏನಿರಲಿದೆ. ಏನಿರುವುದಿಲ್ಲ? ಸಂಕ್ಷಿಪ್ತ ವಿವರ ಇಲ್ಲಿದೆ.
ಏನಿರುತ್ತೆ? ಏನಿರುವುದಿಲ್ಲ?
* ಬೆಳಿಗ್ಗೆ 6 ರಿಂದ 10ವರೆಗೆ ದಿನಸಿ, ಹಾಲು ಮತ್ತು ತರಕಾರಿ ಸೇರಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ.
* ಉತ್ಪಾದನಾ ವಲಯಕ್ಕೆ ರಿಯಾಯ್ತಿ: ಗಾರ್ಮೆಂಟ್ ಉದ್ಯಮ ಹೊರತುಪಡಿಸಿ ಉಳಿದ ಎಲ್ಲ ಉತ್ಪಾದನಾ ಘಟಕಗಳ ಚಟುವಟಿಕೆಗಳನ್ನು ಮುಂದುವರಿಸಲು ಅವಕಾಶ ನೀಡಲಾಗಿದೆ. ಗಾರ್ಮೆಂಟ್ಸ್‌ಗಳಲ್ಲಿ ಒಂದೇ ಸೂರಿನಡಿ ಸಾವಿರಾರು ಜನ ಕುಳಿತು ಕೆಲಸ ಮಾಡುತ್ತಾರೆ. 7 ರಿಂದ 8 ಲಕ್ಷ ಜನ ಕೆಲಸ ಮಾಡುತ್ತಿದ್ದಾರೆ. ಇವರನ್ನು ಅಪಾಯಕ್ಕೊಡ್ಡುವುದು ಸರಿಯಲ್ಲ ಎಂಬ ಕಾರಣಕ್ಕೆ ಗಾರ್ಮೆಂಟ್ಸ್ ಘಟಕಗಳನ್ನು ಬಂದ್ ಮಾಡಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ.
* ಮೆಡಿಕಲ್ ಸ್ಟೋರ್, ಆಸ್ಪತ್ರೆಗಳು ಕಾರ್ಯನಿರ್ವಹಿಸಲಿವೆ.
* ನಿರ್ಮಾಣ ವಲಯ, ಕೃಷಿ ವಲಯ, ಮಾಧ್ಯಮ ಮತ್ತು ಅಗತ್ಯ ಸೇವೆಗಳ ಚಟುಟಿಕೆಗೆ ಅವಕಾಶ.
* ಅಂತರರಾಜ್ಯ ಗೂಡ್ಸ್ ವಾಹನಗಳ ಸಂಚಾರಕ್ಕೆ ಅವಕಾಶ.
* ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಇರುವುದಿಲ್ಲ.
* ತುರ್ತು ಸೇವೆ ಬಿಟ್ಟು ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶ ಇಲ್ಲ.
* ಬೆಂಗಳೂರು ಮೆಟ್ರೋ ರೈಲು ಬಂದ್.
* 6 ತಿಂಗಳು ಯಾವುದೇ ಚುನಾವಣೆ ಇರುವುದಿಲ್ಲ. ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯೂ ಸೇರಿ ಎಲ್ಲ ಚುನಾವಣೆಗಳನ್ನು ಮುಂದೂಡಲು ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
* ಹೊಟೇಲ್‌ನಿಂದ ಪಾರ್ಸೆಲ್ ಒಯ್ಯಲು ಅವಕಾಶ.
* ಬಾರ್‌ಗಳಿಂದ ಮದ್ಯವನ್ನು ಪಾರ್ಸೆಲ್ ಒಯ್ಯಬಹುದು.
* ಪೊಲೀಸ್, ಆರೋಗ್ಯ ಮತ್ತು ಕಂದಾಯ ಇಲಾಖೆಗಳನ್ನು ಬಿಟ್ಟು ಉಳಿದ ಇಲಾಖೆಗಳು ಕಾರ್ಯನಿರ್ವಹಿಸುವುದಿಲ್ಲ.
* ಮದುವೆಗಳನ್ನು ನಡೆಸಬಹುದು. ಈ ಸಂಬಂಧ ಈಗಾಗಲೇ ಹೊರಡಿಸಿರುವ ಮಾರ್ಗಸೂಚಿ ಅನ್ವಯವಾಗಲಿದೆ.
ರಾತ್ರಿ ವೇಳೆಯಲ್ಲಿ ಎಂದಿನಂತೆ ರಾತ್ರಿ ಕರ್ಫ್ಯೂ ಮುಂದುವರಿಯುತ್ತದೆ. 2 ವಾರ ಪರಿಸ್ಥಿತಿ ನೋಡಿಕೊಂಡು ನಿರ್ಬಂಧಗಳನ್ನು ಮುಂದುವರಿಸಬೇಕೆ– ಬೇಡವೇ ಎಂಬುದನ್ನು ತೀರ್ಮಾನಿಸಲಾಗುವುದು. ಅನಿವಾರ್ಯ ಆದರೆ ಮುಂದುವರಿಸಲಾಗುವುದು.