ಬೆಂಗಳೂರು ದೇಶದಲ್ಲೇ ಅತೀ ಹೆಚ್ಚು ಸಕ್ರಿಯ ಕೊರೊನಾ ಪ್ರಕರಣ ಹೊಂದಿದ ಜಿಲ್ಲೆ!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿರುವಂತೆಯೇ ಇತ್ತ ಉದ್ಯಾನನಗರಿ ದೇಶದಲ್ಲೇ ಅತೀ ಹೆಚ್ಚು ಸಕ್ರಿಯ ಕೊರೊನಾ ಪ್ರಕರಣಗಳನ್ನು ಹೊಂದಿದ ಜಿಲ್ಲೆಗಳ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.

ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ 16,662 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 1,49,624ಕ್ಕೆ ತಲುಪಿದೆ. ಆ ಮೂಲಕ ದೇಶದಲ್ಲೇ ಅತೀ ಹೆಚ್ಚು ಸಕ್ರಿಯ ಕೊರೊನಾ ಪ್ರಕರಣಗಳನ್ನು ಹೊಂದಿದ ಜಿಲ್ಲೆಗಳ ಪಟ್ಟಿಯಲ್ಲಿ ಸಿಲಿಕಾನ್ ಸಿಟಿ ಅಗ್ರ ಸ್ಥಾನಕ್ಕೇರಿದೆ.  ಬೆಂಗಳೂರಿನ ನಂತರ ಅತಿ ಹೆಚ್ಚು ಸಕ್ರಿಯ ಪ್ರಕರಣಗಳಿರುವ ಜಿಲ್ಲೆ ಪುಣೆ ಆಗಿದ್ದು ಇಲ್ಲಿ 1.1 ಲಕ್ಷ ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರು, ಪುಣೆ ಹೊರತುಪಡಿಸಿದರೆ ಭಾರತದ ಉಳಿದೆಲ್ಲಾ ಜಿಲ್ಲೆಗಳು 1 ಲಕ್ಷಕ್ಕೂ ಕಡಿಮೆ ಸಕ್ರಿಯ ಪ್ರಕರಣಗಳನ್ನು ಹೊಂದಿವೆ. ದೆಹಲಿ 1 ಲಕ್ಷದ ಸಮೀಪದಲ್ಲಿದ್ದು, ಮುಂಬೈ 81,174 ಸಕ್ರಿಯ ಪ್ರಕರಣಗಳನ್ನು ಹೊಂದಿದೆ.

ಕರ್ನಾಟಕದ ಶೇ.70ರಷ್ಟು ಸೋಂಕು ಪ್ರಕರಣಗಳು ಬೆಂಗಳೂರಿನಲ್ಲೇ..!
ಕರ್ನಾಟಕದ ದಾಖಲಾಗಿರುವ ಒಟ್ಟು ಕೋವಿಡ್ ಪ್ರಕರಣಗಳ ಪೈಕಿ ಶೇ.70ರಷ್ಟು ಕೊರೊನಾ ಪ್ರಕರಣಗಳು ಬೆಂಗಳೂರಿನಲ್ಲೇ ದಾಖಲಾಗುತ್ತಿದ್ದು, ನಗರದ ಆರೋಗ್ಯ ವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದೆ. ಬೆಂಗಳೂರಿನಲ್ಲಿ ಪರಿಸ್ಥಿತಿ ಹೀಗೆಯೇ ಮುಂದುವರೆದಲ್ಲಿ ಮೇ.1ರ ಒಳಗೆ ದೈನಂದಿನ ಕೊರೊನಾ ಪ್ರಕರಣಗಳ  ಸಂಖ್ಯೆ 25 ಸಾವಿರಕ್ಕೆ ತಲುಪಲಿದೆ. ಆ ಪೈಕಿ ಶೇ.5ರಷ್ಟು ಜನರಿಗೆ ತುರ್ತು ಸೇವೆ ಒದಗಿಸಬೇಕೆಂದರೂ ಪರಿಸ್ಥಿತಿ ಕಠಿಣವಾಗಲಿದೆ ಎಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ.ಗಿರಿಧರ್ ಬಾಬು ಎಚ್ಚರಿಕೆ ನೀಡಿದ್ದಾರೆ.

ಪರಿಸ್ಥಿತಿ ನಿಯಂತ್ರಣಕ್ಕಾಗಿ ವೀಕೆಂಡ್​ ಕರ್ಫ್ಯೂ ಹಾಗೂ ನೈಟ್​ ಕರ್ಫ್ಯೂ ಮೊರೆ ಹೋಗಲಾಗಿದ್ದು, ಸೋಂಕು ಹಬ್ಬದಂತೆ ತಡೆಗಟ್ಟಲು ಜನರು ಸಹಕರಿಸಲೇಬೇಕಿದೆ. ಎರಡನೇ ಅಲೆಯ ಸೋಂಕು ಅತಿವೇಗವಾಗಿ ವ್ಯಾಪಿಸುತ್ತಿರುವುದರಿಂದ ಜನರು ಮನೆಯಲ್ಲೇ ಇರುವ ಮೂಲಕ ತಮ್ಮ ಹಾಗೂ ತಮ್ಮ ಕುಟುಂಬದವರ  ಆರೋಗ್ಯವನ್ನು ರಕ್ಷಿಸಿಕೊಳ್ಳಬೇಕಿರುವುದು ಸದ್ಯಕ್ಕಿರುವ ಅತ್ಯುತ್ತಮ ಮಾರ್ಗ.

ಭಾರತದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ನಿರೀಕ್ಷೆಗೂ ಮೀರಿ ಹಬ್ಬುತ್ತಿದ್ದು, ಕಳೆದ ಒಂದು ದಿನದಲ್ಲಿ 3.46 ಲಕ್ಷ ಹೊಸ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಮೂರು ದಿನಗಳ ಅವಧಿಯಲ್ಲಿ ದಾಖಲಾದ ಒಟ್ಟು ಸೋಂಕಿತರ ಪ್ರಮಾಣ 9.94ಲಕ್ಷಕ್ಕೇರಿದ್ದು 10 ಲಕ್ಷದತ್ತ ಸಾಗಿದೆ. ಅಲ್ಲದೇ ಶುಕ್ರವಾರ (ಏಪ್ರಿಲ್  24) ಸಹ ದೇಶದಲ್ಲಿ 2,000ಕ್ಕೂ ಅಧಿಕ ಮಂದಿ ಸೋಂಕಿತರು ಸಾವಿಗೀಡಾಗಿದ್ದು, ಸತತ ನಾಲ್ಕನೇ ದಿನ ಸೋಂಕಿತರ ಸಾವಿನ ಪ್ರಮಾಣ 2 ಸಾವಿರದ ಗಡಿ ದಾಟಿದೆ.

Leave a Reply

Your email address will not be published. Required fields are marked *

error: Content is protected !!