ಆಮ್ಲಜನಕದ ಭಾರಿ ಕೊರತೆ: ಆರೋಗ್ಯ ಬಿಕ್ಕಟ್ಟಿನತ್ತ ರಾಜ್ಯ- ಕೋವಿಡ್‌ ರೋಗಿಗಳ ಪರದಾಟ

ಬೆಂಗಳೂರು: ಕೋವಿಡ್‌ ರೋಗಿಗಳ ಸಂಖ್ಯೆ ಶರವೇಗದಲ್ಲಿ ಹೆಚ್ಚುತ್ತಿರುವಂತೆಯೇ ರಾಜ್ಯ ಆಮ್ಲಜನಕದ ಭಾರಿ ಕೊರತೆಯ ಬಿಕ್ಕಟ್ಟಿನತ್ತ ಸಾಗಲಾರಂಭಿಸಿದೆ. ಸದ್ಯ ರಾಜ್ಯಕ್ಕೆ ಸುಮಾರು 500 ಟನ್‌ಗಳಷ್ಟು ಆಮ್ಲಜನಕ ಪೂರೈಕೆಯಾಗುತ್ತಿದೆ. ತಿಂಗಳಾಂತ್ಯದೊಳಗೆ ಇನ್ನೂ 1,000 ಟನ್‌ ಆಮ್ಲಜನಕ ದೊರೆಯದಿದ್ದರೆ ಕೋವಿಡ್‌ ರೋಗಿಗಳ ಚಿಕಿತ್ಸಾ ವ್ಯವಸ್ಥೆಯೇ ಬುಡಮೇಲಾಗುವ ಸನ್ನಿವೇಶ ಎದುರಾಗಿದೆ.

ವೆಂಟಿಲೇಟರ್‌ ಮತ್ತು ಆಮ್ಲಜನಕದ ಪೂರೈಕೆ ವ್ಯವಸ್ಥೆಯುಳ್ಳ ಐಸಿಯು ಹಾಸಿಗೆಗಳ ಕೊರತೆ ತೀವ್ರವಾಗಿ ಕಾಡುತ್ತಿದೆ. ಕೊಳವೆ ಮೂಲಕ ಆಮ್ಲಜನಕ ಪೂರೈಸಿ ಕೋವಿಡ್‌ ರೋಗಿಗಳನ್ನು ಸಾವಿನ ದವಡೆಯಿಂದ ಪಾರುವ ಮಾಡುವ ಅವಕಾಶವಿದ್ದರೂ, ಆಮ್ಲಜನಕದ ಕೊರತೆಯಿಂದ ವೈದ್ಯರು ಕೈ ಚೆಲ್ಲಿ ಕೂರುವಂತಾಗಿದೆ.

ಈಗ ನಿತ್ಯವೂ ಸುಮಾರು 25,000ದಷ್ಟು ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿವೆ. ಈಗಲೇ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯವರು, ರೋಗಿಗಳ ಸಂಬಂಧಿಕರು ಆಮ್ಲಜನಕದ ಸಿಲಿಂಡರ್‌ಗಾಗಿ ಬೀದಿ ಬೀದಿ ಅಲೆಯುತ್ತಿದ್ದಾರೆ. ಆಮ್ಲಜನಕ ಸಂಗ್ರಹಣೆ ಮತ್ತು ಪೂರೈಕೆ ಘಟಕಗಳನ್ನು ಹೊಂದಿರದ ಸಣ್ಣ ಆಸ್ಪತ್ರೆಗಳ ಪರಿಸ್ಥಿತಿ ಶೋಚನೀಯವಾಗಿದೆ. ಕೆಲವೆಡೆ ರೋಗಿಗಳನ್ನು ದಾಖಲು ಮಾಡಿಕೊಳ್ಳುವುದಕ್ಕೂ ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮೇ ಮೊದಲ ವಾರದಲ್ಲಿ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಲಿದ್ದು, ಮೇ ಮಧ್ಯ ಭಾಗದಲ್ಲಿ ನಾಲ್ಕು ಪಟ್ಟು ಹೆಚ್ಚಾಗಬಹುದು ಎಂದು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಅಂದಾಜಿಸಿದೆ. ಮುಂದಿನ 20 ದಿನಗಳಲ್ಲಿ ಬರಬಹುದಾದ ಆಮ್ಲಜನಕದ ಬೇಡಿಕೆ ಸರ್ಕಾರವನ್ನೇ ಕಂಗೆಡಿಸಿದೆ.

ಹಂಚಿಕೆಯಲ್ಲಿ ವ್ಯತ್ಯಾಸ: ರಾಜ್ಯದಲ್ಲಿ ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ಹೆಚ್ಚಿನ ಪ್ರಮಾಣದ ವೈದ್ಯಕೀಯ ಬಳಕೆಯ ಆಮ್ಲಜನಕವನ್ನು ಉತ್ಪಾದಿಸಲಾಗುತ್ತಿದೆ. ಒಟ್ಟಾರೆಯಾಗಿ ನಿತ್ಯವೂ ರಾಜ್ಯದಲ್ಲಿ 878 ಟನ್‌ ವೈದ್ಯಕೀಯ ಬಳಕೆಯ ಗುಣಮಟ್ಟದ ಆಮ್ಲಜನಕ ಉತ್ಪಾದನೆ ಮಾಡಲಾಗುತ್ತಿದೆ. ಅದರಲ್ಲಿ 300 ಟನ್‌ ಮಾತ್ರ ರಾಜ್ಯಕ್ಕೆ ಲಭಿಸುತ್ತಿದೆ. ಉಳಿದದ್ದು ಬೇರೆ ರಾಜ್ಯಗಳಿಗೆ ರವಾನೆಯಾಗುತ್ತಿದ್ದು, ಸಮಸ್ಯೆ ಬಿಗಡಾಯಿಸಲು ಮೂಲಕ ಕಾರಣ ಎನ್ನುತ್ತವೆ ಮೂಲಗಳು.

ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಕೋವಿಡ್‌ ಎರಡನೇ ಅಲೆ ಕರ್ನಾಟಕಕ್ಕಿಂತ ಬೇಗ ಸ್ಫೋಟಗೊಂಡಿತ್ತು. ಆಗ, ಈ ಎರಡೂ ರಾಜ್ಯಗಳಿಗೆ ಇಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ಹಂಚಿಕೆ ಮಾಡಲಾಗಿದೆ. ಸದ್ಯ ಆಮ್ಲಜನಕ ಉತ್ಪಾದನೆ ಮತ್ತು ಹಂಚಿಕೆಯ ಜಾಲವನ್ನು ಕೇಂದ್ರ ಸರ್ಕಾರ ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದು, ಹೆಚ್ಚಿನ ಪಾಲನ್ನು ಪಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿ ರಾಜ್ಯ ಇದೆ ಎಂದು ಮೂಲಗಳು ಹೇಳಿವೆ.

ಸಾಗಣೆಯದ್ದೇ ತಲೆನೋವು

ಒಂದೆಡೆ ಆಮ್ಲಜನಕದ ಲಭ್ಯತೆಯೇ ಕಷ್ಟವಾದರೆ, ಇನ್ನೊಂದೆಡೆ ಸಿಕ್ಕ ಆಮ್ಲಜನಕವನ್ನು ಆಸ್ಪತ್ರೆಯವರೆಗೆ ಸಾಗಿಸುವುದೂ ಕಷ್ಟಕರವಾದ ಸ್ಥಿತಿ ಎದುರಾಗಿದೆ. ದ್ರವರೂಪದ ಆಮ್ಲಜನಕವನ್ನು ಬೃಹತ್‌ ಕಂಟೇನರ್‌ಗಳ ಮೂಲಕ ಹಾಗೂ ಕಂಪ್ರೆಸ್ಡ್‌ ಆಮ್ಲಜನಕವನ್ನು ಸಿಲಿಂಡರ್‌ಗಳ ಮೂಲಕ ಸಾಗಿಸಬೇಕಿದೆ. ಈಗ ಸಾಗಣೆಯ ಕಂಟೇನರ್‌ ಮತ್ತು ಸಿಲಿಂಡರ್‌ಗಳ ಕೊರತೆಯೂ ಹೆಚ್ಚಾಗಿದ್ದು, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲು ಕಾರಣವಾಗಿದೆ.

‘ಏಪ್ರಿಲ್‌–ಮೇ ತಿಂಗಳುಗಳಲ್ಲಿ ಎರಡನೇ ಅಲೆ ಸ್ಫೋಟಗೊಳ್ಳಲಿದೆ ಎಂದು ತಾಂತ್ರಿಕ ಸಲಹಾ ಸಮಿತಿ 2020ರ ನವೆಂಬರ್‌ ತಿಂಗಳಲ್ಲೇ ಎಚ್ಚರಿಸಿತ್ತು. ಆಮ್ಲಜನಕದ ಕೊರತೆ ನೀಗುವುದಕ್ಕೆ ರಾಜ್ಯ ಸರ್ಕಾರ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ರಾಜ್ಯ ಸರ್ಕಾರದ ಹೊಣೆಗೇಡಿತನದಿಂದಾಗಿ ಬಿಕ್ಕಟ್ಟು ಸೃಷ್ಟಿಯಾಗಿದೆ’ ಎಂದು ದೂರುತ್ತಾರೆ ಮಂಡ್ಯದಲ್ಲಿ ಕ್ಲಿನಿಕ್‌ ನಡೆಸುವ ವೈದ್ಯ ಡಾ.ಎಚ್‌.ವಿ. ವಾಸು.

‘ಸಣ್ಣ ಆಸ್ಪತ್ರೆಗಳಲ್ಲಿ ಸಿಲಿಂಡರ್‌ ಮೂಲಕವೇ ಆಮ್ಲಜನಕ ತುಂಬಿಸಿ ತರಬೇಕು. ನಮ್ಮ ಆಸ್ಪತ್ರೆಗೆ ಆಮ್ಲಜನಕ ಪಡೆಯುವುದಕ್ಕೆ ನಿತ್ಯವೂ ಪರದಾಡುತ್ತಿದ್ದೇವೆ. ನಿತ್ಯವೂ ಮೂರರಿಂದ ನಾಲ್ಕು ಬಾರಿ ಸಿಲಿಂಡರ್‌ಗಳನ್ನು ತುಂಬಿಸಿ ತರುತ್ತಿದ್ದೇವೆ. ಹೆಚ್ಚು ಹಣ ಕೊಟ್ಟರೂ ಆಮ್ಲಜನಕ ದೊರೆಯದ ಪರಿಸ್ಥಿತಿ ಇದೆ’ ಎಂದು ಬೆಂಗಳೂರಿನಲ್ಲಿಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯೊಂದರ ಮುಖ್ಯಸ್ಥರು ನೋವು ತೋಡಿಕೊಂಡರು.

‘ವಿತರಣೆಯಲ್ಲಿ ಸಮಸ್ಯೆಗಳಿವೆ’

‘ಗುರುವಾರ ರಾಜ್ಯಕ್ಕೆ 449 ಟನ್‌ ಆಮ್ಲಜನಕ ಪೂರೈಕೆಯಾಗಿದೆ. ಅದು ಬೇಡಿಕೆಗೆ ಸಮನಾದ ಪ್ರಮಾಣ. ಮುಂದಿನ 20 ದಿನಗಳಲ್ಲಿ ಹೆಚ್ಚುವರಿಯಾಗಿ 1,000 ಟನ್‌ ಆಮ್ಲಜನಕ ಬೇಕಿದೆ. ಅದನ್ನು ಹೊಂದಿಸುವುದೇ ನಮ್ಮ ಮುಂದಿರುವ ಸವಾಲು’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಹೇಳಿದ ಅವರು‘ ದೊಡ್ಡ ಆಸ್ಪತ್ರೆಗಳಿಗೆ ಕಂಟೇನರ್‌ ಮೂಲಕ ಆಮ್ಲಜನಕ ಪೂರೈಸಲಾಗುತ್ತಿದೆ. ಅಲ್ಲಿ ಸಮಸ್ಯೆ ಇಲ್ಲ. ಸಣ್ಣ ಆಸ್ಪತ್ರೆಗಳಿಗೆ ಸಿಲಿಂಡರ್‌ ಮೂಲಕ ಒದಗಿಸುವಲ್ಲಿ ಸಮಸ್ಯೆ ಇದೆ. ಅದನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.

‘ಆಮ್ಲಜನಕ ಪೂರೈಕೆ ಕೇಂದ್ರ ತೆರೆಯಿರಿ’

‘ಕೋವಿಡ್‌ ಮೊದಲ ಅಲೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರ ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ 10,100 ಹಾಸಿಗೆಗಳ ಆರೈಕೆ ಕೇಂದ್ರ ತೆರೆದಿತ್ತು. ಅದೇ ರೀತಿ ಈಗಲೂ ತೆರೆಯಬೇಕು . ಅಲ್ಲಿ ಆಮ್ಲಜನಕದ ಕಂಟೇನರ್‌ ಅಳವಡಿಸಿ ಕೊಳವೆ ಮೂಲಕ ರೋಗಿಗಳಿಗೆ ಒದಗಿಸುವ ವ್ಯವಸ್ಥೆ ಮಾಡಬೇಕು’ ಎಂದು ಒತ್ತಾಯಿಸುತ್ತಾರೆ ಡಾ.ಎಚ್‌.ವಿ. ವಾಸು. ಆಮ್ಲಜನಕ ಪೂರೈಕೆಯ ಸೌಲಭ್ಯವುಳ್ಳ ಹಾಸಿಗೆಗಳನ್ನೂ ಹೆಚ್ಚಿಸಬೇಕಿದೆ. ಈ ಕುರಿತು ಮುಖ್ಯಮಂತ್ರಿ ಅಥವಾ ಆರೋಗ್ಯ ಸಚಿವರು ನಿತ್ಯವೂ ಮಾಹಿತಿ ಹಂಚಿಕೊಳ್ಳುವ ವ್ಯವಸ್ಥೆ ಆಗಬೇಕು ಎನ್ನುತ್ತಾರೆ ಅವರು.

Leave a Reply

Your email address will not be published. Required fields are marked *

error: Content is protected !!