ರಾಜ್ಯದ 18 ಇಲಾಖೆಗಳ ಸಿಬ್ಬಂದಿಗೆ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸರಕಾರ ಕಟ್ಟುನಿಟ್ಟಿನ ಸೂಚನೆ
ಬೆಂಗಳೂರು ಎ.23 : ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳನ್ನು ನಿಯಂತ್ರಿಸುವ ಸಲುವಾಗಿ ಕಠಿಣ ನಿಯಮಗಳನ್ನು ಜಾರಿ ಮಾಡಿ ತುರ್ತು ಸೇವೆ ಹೊರತು ಪಡಿಸಿ ಇತರ ವಾಣಿಜ್ಯ ವ್ಯವಹಾರಗಳ ಮೇಲೆ ನಿರ್ಭಂಧ ಹೇರಲಾಗಿದೆ. ಆದರೆ ಇತ್ತ ಮತ್ತೊಂದೆಡೆ ರಾಜ್ಯದ 18 ಇಲಾಖೆಗಳ ಸಿಬ್ಬಂದಿಗೆ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ತಿಳಿಸಿದೆ. ಅಲ್ಲದೆ ಅವರು, ಕೇಂದ್ರ ಸ್ಥಾನ ತೊರೆಯದಂತೆ ಸರಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಈ ಕುರಿತಂತೆ ಸರಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಆದೇಶ ಹೊರಡಿಸಿದ್ದು, ಅದರಂತೆ, ಪ್ರಮುಖವಾದ ಆರೋಗ್ಯ, ವೈದ್ಯಕೀಯ ಶಿಕ್ಷಣ, ಜಿಲ್ಲಾಡಳಿತ, ಕಂದಾಯ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಆಹಾರ, ಸಾರಿಗೆ, ವಾರ್ತಾ, ಇಂಧನ, ಖಜಾನೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಪಶುಸಂಗೋಪನೆ, ಕಾರ್ಮಿಕ, ಅರಣ್ಯ, ಕೃಷಿ, ಕೃಷಿ ಮಾರುಕಟ್ಟೆ ಹಾಗೂ ತೋಟಗಾರಿಕೆಯು ಅಗತ್ಯ ಸೇವೆಗಳೆಂದು ಪಟ್ಟಿ ಮಾಡಿ, ಈ 18 ಇಲಾಖೆಗಳ ಸಚಿವಾಲಯ, ಜಿಲ್ಲಾ ಮಟ್ಟದ ಅಧಿಕಾರಿ ಮತ್ತು ನೌಕರ, ಸಿಬ್ಬಂದಿ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು.
ಕೋವಿಡ್ ನಿರ್ವಹಣೆ, ನಿಯಂತ್ರಣ ಕಾರ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಕಡ್ಡಾಯವಾಗಿ ಆ ಜವಾಬ್ದಾರಿ ನಿರ್ವಹಿಸಬೇಕು ಎಂದು ತಿಳಿಸಲಾಗಿದೆ. ಇನ್ನು ಉಳಿದ ಕಚೇರಿ, ಅರೆ ಸರಕಾರಿ, ಸ್ವಾಯತ್ತ ಸಂಸ್ಥೆ, ನಿಗಮ, ಮಂಡಳಿ, ಪ್ರಾಧಿಕಾರಗಳಲ್ಲಿ ಶೇ. 50ರಷ್ಟು ಉದ್ಯೋಗಿಗಳು ಕರ್ತವ್ಯಕ್ಕೆ ಹಾಜರಾಗಬೇಕು. ಹಾಗೂ ಉಳಿದ ಶೇ. 50ರಷ್ಟು ಸಿಬಂದಿಯನ್ನು ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಬೇಕು ಎಂದು ಸೂಚಿಸಿದ್ದಾರೆ. ಇವುಗಳ ಪೈಕಿ ದೃಷ್ಟಿ ದೋಷವುಳ್ಳವರು, ವಿಕಲಚೇತನರು ಹಾಗೂ ಗರ್ಭಿಣಿಯರಿಗೆ ವಿನಾಯಿತಿ ನೀಡಲಾಗಿದೆ.