ವಾಹನಗಳ ಮೇಲೆ ರೈಲು ಹರಿದು ಐವರು ಸ್ಥಳದಲ್ಲಿಯೇ ದಾರುಣ ಸಾವು
ಶಹಜಹಾನಪುರ, ಎ.22: ಕ್ರಾಸಿಂಗ್‍ನಲ್ಲಿ ವಾಹನಗಳ ಮೇಲೆ ರೈಲು ಹರಿದು ಐವರು ಸ್ಥಳದಲ್ಲಿಯೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಶಹಜಹಾನಪುರದ ಮ್ಯಾನಲ್ ಲೆವೆಲ್ ಕ್ರಾಸಿಂಗ್‍ನಲ್ಲಿ ನಡೆದಿದೆ. ಘಟನೆಯಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ. ಮೃತ ಪಟ್ಟ ಐವರಲ್ಲಿ ಮೂವರು ಒಂದೇ ಕುಟುಂಬದವರಾಗಿದ್ದಾರೆ.
ಇನ್ನು ಗಂಭೀರವಾಗಿ ಗಾಯಗೊಂಡ ಓರ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರೈಲ್ವೆ ಹಳಿ ಸಮೀಪ ಮ್ಯಾನಲ್ ಲೆವೆಲ್ ಕ್ರಾಸಿಂಗ್‍ನಲ್ಲಿ ಗೇಟು ಮುಚ್ಚದಿರುವುದೇ ಈ ಅವಘಡಕ್ಕೆ ಕಾರಣವಾಗಿದ್ದು, ಲಕ್ನೊ-ಚಂಡೀಘಡ ಸೂಪರ್ ಫಾಸ್ಟ್ ಲೊಕೊಮೊಟಿವ್ ರೈಲು ಎರಡು ಟ್ರಕ್, ಕಾರು ಮತ್ತು ಬೈಕ್ ಮೇಲೆ ಹರಿದಿದೆ ಎಂದು ವರದಿಯಾಗಿದೆ.
ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಎರಡೂ ಕಡೆಯ ರೈಲು ಸಂಚಾರಕ್ಕೆ ಅಡ್ಡಿಯಾಗಿದೆ. ಘಟನೆಯಲ್ಲಿ ಮೃತರ ಕುಟುಂಬಸ್ಥರಿಗೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಇನ್ನು ಘಟನೆ ಬಗ್ಗೆ, ಜಿಲ್ಲಾಧಿಕಾರಿ ಇಂದ್ರ ವಿಕ್ರಮ್ ಸಿಂಗ್ ಅವರು ಮಾಹಿತಿ ನೀಡಿ, ಸ್ಥಳಕ್ಕೆ ರೈಲ್ವೆ ಎಂಜಿನಿಯರ್‍ಗಳ ತಂಡ ಆಗಮಿಸಿದ್ದು ಸದ್ಯ ದುರಸ್ತಿ ಕಾರ್ಯ ನಡೆಯುತ್ತಿದೆ. ಹಾನಿಗೀಡಾಗಿರುವ ಹಳಿಯ ಕೆಲಸ ನಡೆಯುತ್ತಿದ್ದು ಮೂರ್ನಾಲ್ಕು ಗಂಟೆಗಳಲ್ಲಿ ಸಂಚಾರ ಸಹಜ ಸ್ಥಿತಿಗೆ ಬರಲಿದೆ ಎಂದು ತಿಳಿಸಿದ್ದಾರೆ.