ವೀಕೆಂಡ್ ಲಾಕ್ ಡೌನ್- ಬಿಗಿ ನಿಯಮಕ್ಕೆ ಜನ ಹೈರಾಣು!

ಮಂಗಳೂರು ಎ.21: ಕೋವಿಡ್ ನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರ ನೈಟ್‌ ಕರ್ಫೂ, ವೀಕೆಂಡ್ ಲಾಕ್ ಡೌನ್ ಗಳನ್ನು ವಿಧಿಸಿದೆ. ಅದರಂತೆ ವಾರಾಂತ್ಯದಲ್ಲಿ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ. ಆದ್ದರಿಂದ ಈಗಾಗಲೇ ನಿಗದಿಯಾಗಿರುವ ಕಾರ್ಯಕ್ರಮ ಅದರಲ್ಲೂ ಮದುವೆ ಕಾರ್ಯಕ್ರಮ ಆಯೋಜಿಸಿರುವವರಿಗೆ ಈ ವೀಕೆಂಡ್ ಲಾಕ್ ಡೌನ್ ನಿಂದಾಗಿ ಏನೂ ತೋಚದಂತಾಗಿದೆ. ಇದೀಗ ಈ ಬಗ್ಗೆ ಮಂಗಳೂರಿನಲ್ಲಿ ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮತ್ತು ಕಮಿಷನರ್ ಶಶಿಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, ವೀಕೆಂಡ್ ಕರ್ಫ್ಯೂ ಸಮಯದಲ್ಲಿ ನಿಗದಿಯಾಗಿದ್ದ ಮದುವೆ ನಡೆಸಲು ಅನುಮತಿ ಇದೆ. ಆದರೆ ಕೇವಲ 50 ಜನರು ಮಾತ್ರ ಮದುವೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಇದಕ್ಕಾಗಿ ಮದುವೆ ಮನೆಯವರು ಆರಂಭದಲ್ಲಿಯೇ 50 ಜನರ ಪಟ್ಟಿ ತಯಾರಿಸಬೇಕು. ಆ ಪಟ್ಟಿಯನ್ನು ಸ್ಥಳೀಯಾಡಳಿತಕ್ಕೆ ತೋರಿಸಿ ಅನುಮತಿ ಪಡೆದುಕೊಳ್ಳಬೇಕು. ಆ ಬಳಿಕ ಆ 50 ಜನರ ಅನುಮತಿ ಪಡೆದ ಪತ್ರ ಮತ್ತು ಮದುವೆ ಆಮಂತ್ರಣ ಪತ್ರಿಕೆ ಹಾಗೂ ಮದುವೆಗೆ ಹೋಗುವವರ ಐಡಿ ಕಾರ್ಡ್ ಕಡ್ಡಾಯವಾಗಿ ಸಲ್ಲಿಸಬೇಕು.

ಈ ಮೂರು ದಾಖಲೆಗಳನ್ನು ವಾಟ್ಸ್ ಅಪ್ ನಲ್ಲಿ ಪೊಲೀಸರಿಗೆ ತೋರಿಸಿ ಪ್ರಯಾಣಿಸಬಹುದು. ಆದರೆ ಮದುವೆ ಆಮಂತ್ರಣ ಪತ್ರಿಕೆಯ ನೈಜ ಪ್ರತಿ ಪ್ರಯಾಣದ ವೇಳೆ ಕೈಯಲ್ಲಿರಲೇಬೇಕಾಗಿದೆ. ಅಲ್ಲದೆ ಮದುವೆಯ ಗೆಸ್ಟ್ ಲಿಸ್ಟ್ ನಲ್ಲಿರುವವರ ಐಡಿ ತೋರಿಸಿದರಷ್ಟೇ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು‌ ಎಂದು ತಿಳಿಸಿದ್ದಾರೆ. ಇನ್ನು ಮದುವೆಗೆ ಹೋಗುವ ಕಾರಿನಲ್ಲಿ ಏಳೆಂಟು ಜನರನ್ನು ತುಂಬಿದರೆ ಪ್ರಯಾಣಿಸಲು ಅವಕಾಶವಿಲ್ಲ. ಈಗಾಗಲೇ ಮಾಡಿದ ನಿಯಮದಂತೆ ದೇವಸ್ಥಾನಗಳಲ್ಲಿ ‌ಮದುವೆಗೆ ಅನುಮತಿ ನೀಡಲಾಗಿದೆ. ದೇವಸ್ಥಾನದಲ್ಲಿ ಮದುವೆ ನಡೆಯುವುದಾದರೆ 50 ಜನರನ್ನು ಸೇರಿಸಿ ಮಾಡಬಹುದು. ಇದರಲ್ಲಿ ಮದುವೆಯ ಫೋಟೋಗ್ರಾಫರ್ಸ್, ಅರ್ಚಕರು ಎಲ್ಲರೂ ಒಳಗೊಂಡಿರುತ್ತಾರೆ‌ ಎಂದು ಮಾಹಿತಿ ನೀಡಿದರು.
ದೇವಸ್ಥಾನದ ಧಾರ್ಮಿಕ ಕಾರ್ಯಗಳನ್ನು ಅರ್ಚಕರು ಸೇರಿಕೊಂಡು ಮಾಡಬೇಕು. ಆದರೆ ಯಾವುದೇ ಸಾರ್ವಜನಿಕರು ಈ ಆಚರಣೆಯಲ್ಲಿ ಭಾಗವಹಿಸುವಂತಿಲ್ಲ. ಈ ಆದೇಶ ಇಂದಿನಿಂದಲೇ ಜಿಲ್ಲೆಯ ಎಲ್ಲಾ ದೇವಸ್ಥಾನಗಳಲ್ಲಿ ಜಾರಿಯಾಗಲಿದೆ ಎಂದು ತಿಳಿಸಿದರು.

ಅವಶ್ಯಕತೆ ಪಾಸ್ ಮತ್ತು ಐಡಿ ಕಾರ್ಡ್ ಬಳಸಿ ಕುಟುಂಬದ ಜೊತೆ ಸಂಚರಿಸಲು ಅವಕಾಶವಿಲ್ಲ. ಯಾರ ಹೆಸರಿನಲ್ಲಿ ಪಾಸ್ ಮತ್ತು ಐಡಿ ಕಾರ್ಡ್ ಇದೆಯೋ ಅವರಿಗಷ್ಟೇ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಇನ್ನು ವೀಕೆಂಡ್ ‌ಕರ್ಫ್ಯೂ ಸಮಯದಲ್ಲಿ ಬೆಳಿಗ್ಗೆ 6 ರಿಂದ 10ರವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ಇದೆ. ಅದರೆ ಈ ವಸ್ತು ಖರೀದಿ ಅವರ ಮನೆಯ ಅಕ್ಕಪಕ್ಕದಲ್ಲೇ ಖರೀದಿಸಬೇಕು.ವಾಹನ ಬಳಸಿ ಅಗತ್ಯ ವಸ್ತು ಖರೀದಿಗೆ ಹೋಗುವುದಾದರೂ ಅದಕ್ಕೆ ಸೂಕ್ತ ಕಾರಣ ಬೇಕು. ಅದನ್ನು ದುರುಪಯೋಗ ಪಡಿಸಿಕೊಂಡರೆ ಅಂಥವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!