ನಿನ್ನೆ ಜಾರಿ ಮಾಡಿರುವ ವೀಕೆಂಡ್ ಲಾಕ್ ಡೌನ್’ ಗೆ ವಿರೋಧ ವ್ಯಕ್ತಪಡಿಸಿದ ಶಾಸಕ ರಘುಪತಿ ಭಟ್
ಉಡುಪಿ, ಏ 21(ಉಡುಪಿ ಟೈಮ್ಸ್ ವರದಿ) : ಜಿಲ್ಲೆಯಲ್ಲಿನ ನೈಟ್ ಕಫ್ರ್ಯೂ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಮೇಲಿನ ನಿರ್ಭಂದದ ವಿರುದ್ಧ ಧ್ವನಿ ಎತ್ತಿದ್ದ ಶಾಸಕ ರಘುಪತಿ ಭಟ್ ಅವರು ಇದೀಗ ಮತ್ತೆ ನಿನ್ನೆ ಜಾರಿ ಮಾಡಿರುವ ವೀಕೆಂಡ್ ಲಾಕ್ ಡೌನ್’ ಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಸದ್ಯ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ನಿಯಂತ್ರಣದಲ್ಲಿದ್ದು, ವೀಕೆಂಡ್ ಲಾಕ್ ಡೌನ್’ ಹಾಗೂ ನೈಟ್ ಕಪ್ರ್ಯೂವಿನ ಅಗತ್ಯ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಈ ಬಗ್ಗೆ ರಾಜ್ಯ ಸರಕಾರಕ್ಕೆ ಮನವರಿಕೆ ಮಾಡಲಾಗುವುದು ಎಂದೂ ಭರವಸೆ ನೀಡಿದ್ದಾರೆ. ಇದೇ ವೇಳೆ ಮಾತು ಮುಂದುವರೆಸಿದ ಅವರು, ಯಾವ ಜಿಲ್ಲೆಗಳಲ್ಲಿ ದಿನಕ್ಕೆ 1 ಸಾವಿರಕ್ಕಿಂತ ಕಡಿಮೆ ಕೇಸ್ ಇದೆಯೋ ಅಲ್ಲಿ ಕಫ್ರ್ಯೂ ನ ಅಗತ್ಯ ಇಲ್ಲ ಎನ್ನುವುದು ನನ್ನ ಅಭಿಪ್ರಾಯವಾಗಿದೆ. ನಮ್ಮ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿ ಅಗತ್ಯ ಆಸ್ಪತ್ರೆ, ಬೆಡ್ ಸೌಲಭ್ಯ, ಔಷಧಗಳ ಸಂಫೂರ್ಣ ವ್ಯವಸ್ಥೆ ಕೂಡಾ ಇದೆ. ಆದ್ದರಿಂದ ಅವಿಭಜಿತ ಜಿಲ್ಲೆಗೆ ನೂತನ ನಿಯಮವಾಳಿಯ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಸರ್ಕಾರದ ನೂತನ ನಿಯಮಾವಳಿ ನೈಟ್ ಕಪ್ರ್ಯೂ ಹಾಗೂ ವೀಕೆಂಡ್ ಲಾಕ್ ಡೌನ್’ನಿಂದ ಜನತೆಗೆ ಪೂರ್ವ ನಿಗದಿತ ಧಾರ್ಮಿಕ ಮತ್ತು ಇತರ ಸಮಾರಂಭಗಳಿಗೆ ತೊಂದರೆಯಾಗಲಿದೆ. ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ನಿಯಂತ್ರಣದಲ್ಲಿ ಇರುವ ಕಾರಣ ಉಡುಪಿ, ಮಂಗಳೂರಿಗೆ ನೈಟ್ ಕಪ್ರ್ಯೂ ಅಗತ್ಯವೂ ಇಲ್ಲ. ಈಗಾಗಲೇ ಹಲವೆಡೆ ಮದುವೆ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಕ್ಕೆ ಮೂಹೂರ್ತ ನಿಗದಿ ಮಾಡಿರುತ್ತಾರೆ. ಭಾನುವಾರ ತುಂಬಾ ಮದುವೆ ಕಾರ್ಯಕ್ರಮಗಳು ನಿಗದಿ ಆಗಿವೆ. ಆದರೆ ವೀಕೆಂಡ್ ಲಾಕ್ ಡೌನ್ ಇರುವುದರಿಂದ ತೊಂದರೆ ಆಗಲಿದೆ. ಮದುವೆ ಸಮಾರಂಭಗಳಿಗೆ ತೆರಳುವವರಿಗೆ ಅನುಕೂಲವಾಗುವಂತೆ ಪಾಸ್ ವ್ಯವಸ್ಥೆಗೆ ಉಡುಪಿಯಲ್ಲಿ ಚಿಂತನೆ ನಡೆದಿದೆ ಎಂದು ಹೇಳಿದರು.