ಶಿರ್ವ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಒಲಿದ ಪಂಚಾಯತ್’ನ ಅಧ್ಯಕ್ಷ ಪಟ್ಟ
ಶಿರ್ವ ಎ.21(ಉಡುಪಿ ಟೈಮ್ಸ್ ವರದಿ): ಶಿರ್ವ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ.ಆರ್.ಪಾಟ್ಕರ್ ಅವರು ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಬಿಜೆಪಿ ಬೆಂಬಲಿತ ಗ್ರೆಗೋರಿ ಕೊನ್ರಾಡ್ ಕ್ಯಾಸ್ತಲಿನೋ ಅವರ ನಿಧನದ ಬಳಿಕ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಈ ಚುನಾವಣೆಯಲ್ಲಿ, ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ.ಆರ್.ಪಾಟ್ಕರ್ ಅವರು ಆಯ್ಕೆಯಾಗುವ ಮೂಲಕ ಗ್ರಾಮ ಪಂಚಾಯತ್ ಅಧ್ಯಕ್ಷರ ಸ್ಥಾನ ಕಾಂಗ್ರೆಸ್ ಪಾಲಾಗಿದೆ.
ಅಧ್ಯಕ್ಷ ಗಾದಿಗಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ. ಆರ್ ಪಾಟ್ಕರ್ ಮತ್ತು ಬಿಜೆಪಿ ಬೆಂಬಲಿತ ಪ್ರವೀಣ್ ಸಾಲ್ಯಾನ್ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ 18-16 ಮತಗಳ ಅಂತರದಿಂದ ಪಾಟ್ಕರ್ ಜಯಶಾಲಿಯಾಗಿದ್ದಾರೆ. ಈ ಮೊದಲು ಕಾಂಗ್ರೆಸ್ ಬೆಂಬಲಿತ 19 ಸದಸ್ಯರಿದ್ದರೂ ಅನಿರೀಕ್ಷಿತ ಬೆಳವಣಿಗೆಯಲ್ಲಿ ಬಿಜೆಪಿ ಬೆಂಬಲಿತರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಕಳೆದ ಅವಧಿಯಲ್ಲಿಯೂ ಕಾಂಗ್ರೆಸ್ ಗೆ ಬಹು ಮತವಿದ್ದರೂ ಬಿಜೆಪಿ ಬೆಂಬಲಿತರು ಅಧ್ಯಕ್ಷ ರಾಗಿ ಆಯ್ಕೆಯಾಗಿದ್ದರು. ಫೆಬ್ರವರಿಯಲ್ಲಿ ಅಧ್ಯಕ್ಷರ ಚುನಾವಣೆ ಗೆ ಮೊದಲು ಬಿಜೆಪಿ ಪ್ರಮುಖರ ಸಮ್ಮುಖದಲ್ಲಿ ದಿ.ಕೊನ್ರಾಡ್ ಕ್ಯಾಸ್ತಲಿನೋ ಮತ್ತು 3 ಸದಸ್ಯರು ಹಾಗೂ ಇತರೆ ಬೆಂಬಗಲಿಗರೊಂದಿಗೆ ಅಧಿಕೃತ ವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರಿಂದ ಅಧ್ಯಕ್ಷ ಗಾದಿ ಬಿಜೆಪಿ ಪಾಲಾಗಿತ್ತು. ಮಾ.29 ರಂದು ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಶ್ರೀನಿವಾಸ ಶೆಣೈ ಸದಸ್ಯರಾಗಿ ಆಯ್ಕೆ ಯಾಗಿದ್ದರು.