178 ಪ್ರಯಾಣಿಕರೊಂದಿಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ದೋಹಾದಿಂದ ಮಂಗಳೂರಿಗೆ
ಮಂಗಳೂರು: ಮೊದಲನೇ ಬಾರಿಗೆ 178 ಪ್ರಯಾಣಿಕರೊಂದಿಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ದೋಹಾದಿಂದ ಮಂಗಳೂರಿಗೆ ತಲುಪಿದೆ. ಕಳೆದೆರಡು ತಿಂಗಳಿನಿಂದ ಜಾತಕ ಪಕ್ಷಿಗಳಂತೆ ಕಾದು ಕುಳಿತಿದ್ದವರಿಗೆ ತಾತ್ಕಾಲಿಕ ನೆಮ್ಮದಿ. ಇಂದು ಪ್ರಯಾಣಿಸಿದ ಎಲ್ಲರ ಮೊಗದಲ್ಲೂ ದೀಪಾವಳಿ, ಈದ್, ಕ್ರಿಸ್ಮಸ್ ಹಬ್ಬ ಆಚರಿಸಿದಷ್ಟು ಸಂಭ್ರಮ. 40ಕ್ಕೂ ಅಧಿಕ ಗರ್ಭಿಣಿಯರು, ವಯೋವೃದ್ದರು, ವಿದ್ಯಾರ್ಥಿಗಳು, ವೈದ್ಯಕೀಯ ಚಿಕಿತ್ಸೆಗೆ ಹೋಗ ಬೇಕಾಗಿರುವವರು, ಆರ್ಥಿಕ ಹಿನ್ನಡೆಯಿಂದ ಅತಂತ್ರ ಪರಿಸ್ಥಿತಿಯಲ್ಲಿರುವ ನಿರುದ್ಯೋಗಿಗಳು, ಆನ್ ಅರೈವಲ್ ಹಾಗೂ ಫ್ಯಾಮಿಲಿ ವೀಸಾದಲ್ಲಿ ಬಂದು ಸಿಕ್ಕಿ ಕೊಂಡಿರುವವರು… ಹೀಗೆ 178 ಜನ ಇಂದು ತಮ್ಮ ಮಾತೃಭೂಮಿಗೆ ತಲುಪಿದ್ದಾರೆ.
ಜೂನ್ 4ರಂದು ಭಾರತದ ವಿದೇಶಾಂಗ ಸಚಿವಾಲಯದಿಂದ ಹೊರಬಿದ್ದ ‘ವಂದೇ ಭಾರತ್ ಮಿಷನ್’ 2ನೇ ಹಂತದ ಪಟ್ಟಿ ಬಿಡುಗಡೆಗೊಂಡಾಗ ಕತಾರ್ ನಲ್ಲಿ ನೆಲೆಸಿರುವ ಕನ್ನಡಿಗರಿಗೆ ಶಾಕ್ ಆಗಿದ್ದಂತೂ ನಿಜ. ಅಪೇಕ್ಷೆಗೆ ಹಲವಾರು ಕಾರಣಗಳು ಇದ್ದು ಕತಾರ್ನಲ್ಲಿರುವ ಎಲ್ಲ ಕರ್ನಾಟಕ, ಮೂಲತಃ ಸಂಘಟನೆಗಳು ಕರ್ನಾಟಕ ಸಂಘ, ತುಳುಕೂಟ, ಕರ್ನಾಟಕ ಮುಸ್ಲಿಂ ಕಲ್ಚರಲ್ ಅಸೋಸಿಯೇಷನ್, ಮ್ಯಾಂಗಲೂರ್ ಕ್ರಿಕೆಟ್ ಕ್ಲಬ್, ಬಂಟ್ಸ್ ಕತಾರ್, ಮ್ಯಾಂಗಲೂರ್ ಕಲ್ಚರಲ್ ಅಸೋಸಿಯೇಷನ್, ಸೌತ್ ಕೆನರಾ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್, ಕತಾರ್ ಬಿಲ್ಲವಾಸ್ ಜಂಟಿಯಾಗಿ ಕೇಂದ್ರ ಮಂತ್ರಿಗಳಿಗೆ, ರಾಜ್ಯದ ಮುಖ್ಯಮಂತ್ರಿ ಮಂತ್ರಿ, ವಿಧಾನಸಭಾ ಶಾಸಕರಿಗೆ, ಲೋಕಸಭಾ ಸದಸ್ಯರುಗಳಿಗೆ ಮನವಿ ಮಾಡಿದ್ದರು.
ಅದಕ್ಕೂ ಮಿಗಿಲಾಗಿ ವೈಯಕ್ತಿಕವಾಗಿ ನನ್ನಂತೆ ಹಲವಾರು ಜನರು ಬೇರೆ ಬೇರೆ ಮಂತ್ರಿಗಳಿಗೆ, ಇನ್ನಿತರ ಜನಪ್ರತಿನಿಧಿಗಳಿಗೆ ನಿರಂತರವಾಗಿ ಮಾತನಾಡುತ್ತಲೇ ಇದ್ದರು. ವಂದೇ ಭಾರತ್ ದೋಹಾ ಕರ್ನಾಟಕ ಸಮಿತಿ ಕೂಡ ಮನವಿ ಮಾಡಿತ್ತು ಮತ್ತು ಭಾರತೀಯ ದೂತವಾಸ ಕೂಡ ಇದಕ್ಕೆ ಸಕಾರಾತ್ಮವಾಗಿ ಸ್ಪಂದಿಸಿ, ವಿದೇಶಾಂಗ ಮಂತ್ರಾಲಯಕ್ಕೆ ಮನವಿಯನ್ನು ಮಾಡಿದ್ದರು. ಅಪೇಕ್ಷೆ ನುಚ್ಚುನೂರಾದಾಗ ಸ್ವಾಭಾವಿಕವಾಗಿ ನಿರಾಸೆಯಾಗಿತ್ತು.
ಆಗ ನಮ್ಮ ನೆರವಿಗೆ ಬಂದವರು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆಯವರು. ಮೊದಲೆರಡು ದಿನ ಅವರು ಕೂಡ ರಾಜ್ಯದ, ದೇಶದ ಮಂತ್ರಿಗಳ ನಡುವೆ ಮಾತನಾಡಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡರು. ಒಂದು ಕೆಲಸ ಮಾಡಿ ಕೊಡಬೇಕಾದರೆ ಅಧಿಕಾರದಲ್ಲಿ ಇರಬೇಕೆಂದಿಲ್ಲ. ಮನಸ್ಸಿದ್ದರೆ ಮಾರ್ಗವೂ ತೋಚಿತು ಎನ್ನುವುದಕ್ಕೆ ಇವರೇ ಸಾಕ್ಷಿ. ನಾಗರಿಕ ವಿಮಾನಯಾನ ಮಂತ್ರಾಲಯದ ಅಧಿಕಾರಿಗಳೊಂದಿಗೆ ದಿನಕ್ಕೆರಡು ಬಾರಿ ನಿರಂತರವಾಗಿ ಪ್ರಯತ್ನ ಮಾಡುತ್ತಲೇ ಇದ್ದರು. ಅದಲ್ಲದೆ ತಾವಾಗೇ ದೂರವಾಣಿ ಮಾಡಿ ಅಪ್ಡೇಟ್ ಮಾಡ್ತಾ ಇದ್ದರು.
ಇವರನ್ನು ಬಲ್ಲವರಿಗೆ ಅವರ ಸ್ವಭಾವ ಚೆನ್ನಾಗಿ ಗೊತ್ತಿದೆ. ಹಿಡಿದ ಕೆಲಸ ಮಾಡದೇ ಬಿಡಲ್ಲ. ಕಡೆಗೂ ಜೂನ್ 11 ರಂದು ಅನುಮೋದನೆ ಸಿಕ್ಕಿತು. ಇತರ ರಾಜಕಾರಣಿಗಳಂತೆ ಖಂಡಿತ ಮಾಡುತ್ತೇನೆ ಅಂತ ಯಾವತ್ತೂ ಹೇಳಿರಲಿಲ್ಲ. ಪ್ರಯತ್ನ ಮಾಡುತ್ತೇನೆ ಅಂತ ಹೇಳ್ತಾ ಇದ್ರು. ಇದು ಅವರ ಪ್ರಾಮಾಣಿಕ ಪ್ರಯತ್ನಕ್ಕೆ ಸಂದ ಫಲ. ಕತಾರ್ ನಲ್ಲಿರುವ ಕನ್ನಡಿಗರ ಪರವಾಗಿ ಅವರಿಗೊಂದು ಸಲಾಂ. ಕತಾರ್ ನಲ್ಲಿರುವ ಭಾರತೀಯ ದೂತವಾಸ, ಹಾಗೆ ನನ್ನೊಂದಿಗೆ ಪ್ರಯಾಣಿಕರ ಪಟ್ಟಿ ತಯಾರಿಸುವಲ್ಲಿ ಸಾಕಷ್ಟು ಶ್ರಮಿಸಿದ ವಂದೇ ಭಾರತ್ ದೋಹಾ ಕರ್ನಾಟಕ ಸಮಿತಿಯ ಇತರ ಸದಸ್ಯರಾದ ನಾಗೇಶ್ ರಾವ್, ಸಂದೀಪ್ ರೆಡ್ಡಿ, ಶಶಿಧರ್ ಹೆಬ್ಬಾಳ್, ಕಲೀಲ್ ಇವರುಗಳಿಗೆ ವಂದನೆಗಳು.
ಕರ್ನಾಟಕಕ್ಕೆ ಇದುವರೆಗೆ 2 ವಂದೇ ಭಾರತ್ ಮಿಷನ್ ಫ್ಲೈಟ್ ಹಾಗೂ ಇನ್ನೊಂದು ICBF-KSQ ಚಾರ್ಟರ್ಡ್ ಫ್ಲೈಟ್ ಹೋಗಿದ್ದು, ಕಾಯುತ್ತಿರುವ ಸಾವಿರಾರು ಜನರನ್ನು ಸಾಗಿಸಲು ಇನ್ನೂ ನಮಗೆ ಹಲವಾರು ವಿಮಾನಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಮತ್ತೊಮ್ಮೆ ಜಯಪ್ರಕಾಶ್ ಹೆಗ್ಡೆಯವರ ಜೊತೆಗೆ ಇನ್ನಿತರ ಎಲ್ಲಾ ಜನಪ್ರತಿನಿಧಿಗಳಲ್ಲಿ ಕಳಕಳಿಯ ವಿನಂತಿ.. ನಮಗೆ ನಮ್ಮ ಜನ್ಮ ಭೂಮಿಗೆ ಬರಲು ಸಹಕರಿಸಿ ಹಾಗೂ ಅವಕಾಶ ಮಾಡಿಕೊಡಿ.
ದೀಪಕ್ ಶೆಟ್ಟಿ ಕತಾರ್