ಅಕ್ರಮ ಮರಳು: ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಯುವ ಕಾಂಗ್ರೆಸ್ ಆಗ್ರಹ
ಉಡುಪಿ : ಅಕ್ರಮವಾಗಿ ಹಿರಿಯಡ್ಕದ ಸ್ವರ್ಣಾ ನದಿಯಿಂದ ಮರಳು ಸಾಗಣೆ ಮತ್ತು ಟೆಂಡರ್ ಪ್ರತಿಕ್ರಿಯೆಯಲ್ಲಿ ನಡೆದಿರುವ ಹಗರಣದಲ್ಲಿ ಭಾಗಿಯಾದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ವಿ. ಅಮೀನ್ ನೇತೃತ್ವದ ಜಿಲ್ಲಾ ಕಾಂಗ್ರೆಸ್ ನಿಯೋಗ ಉಡುಪಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದೆ. ಉಡುಪಿ ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಶಿರೂರು ಮಠದ ಬಳಿ ಇರುವ ಸ್ವರ್ಣ ನದಿಯಲ್ಲಿ ಅಕ್ರಮವಾಗಿ ನೂರಾರು ಲೋಡ್ ಗಳನ್ನು ಮರಳು ಸಾಗಾಟ ನಡೆಯುತ್ತಿದೆ. ನಿಯಮ ಬಾಹಿರವಾಗಿ ಜೆಸಿಬಿಗಳ ಮೂಲಕ ನೂರಾರು ಲಾರಿಗಳಷ್ಟು ಮರಳು ತೆಗೆದು ಸಾಗಾಟ ಮಾಡಿರುವುದು ಕಂಡುಬರುತ್ತದೆ. ನಿನ್ನೆ ಲೋಕಾಯುಕ್ತ ಅಧಿಕಾರಿಗಳು ಅಕ್ರಮ ಮರಳುಗಾರಿಕೆ ನಡೆಸುವಾಗ ದಾಳಿ ನಡೆಸಿದ್ದನ್ನು ಸ್ಮರಿಸುತ್ತೇವೆ. ಶಿರೂರು ಹಾಗೂ ಬಜೆಯಲ್ಲಿ ಎರಡು ಕಡೆಗಳಲ್ಲಿ ಮರಳು ತೆಗೆಯಲು ನಡೆಸಿದ ಟೆಂಡರ್ ಪ್ರಕ್ರಿಯೆ ಬಗ್ಗೆ, ಅಕ್ರಮ ಮರಳು ಸಾಗಾಟದಲ್ಲಿ ಭಾಗಿಯಾದ ಗುತ್ತಿಗೆದಾರ, ನಗರಸಭೆ ಹಾಗೂ ಗಣಿ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾಗೂ ರಾಜಕಾರಣಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ದೂರು ನೀಡುತ್ತಿದ್ದೇವೆ. ಸರಕಾರಕ್ಕೆ ಇಲ್ಲಿಯ ತನಕ ರಾಜಧನ ತಪ್ಪಿಸಿ ಎಷ್ಟು ಮರಳನ್ನು ಸಾಗಿಸಲಾಗಿದೆ ಹಾಗೂ ಸರಕಾರದ ಬೊಕ್ಕಸಕ್ಕೆ ಇದರಿಂದ ಎಷ್ಟು ನಷ್ಟವಾಗಿದೆ ಎಂದು ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆಯೂ ಜಿಲ್ಲಾಧಿಕಾರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮನವಿ ಮಾಡಿಕೊಂಡಿದೆ. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಯುವ ಕಾಂಗ್ರೆಸ್ ಉಡುಪಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಜಿಲ್ಲಾ ಮುಖಂಡರಾದ ಜನಾರ್ದನ ಭಂಡಾರ್ಕರ್ ಮತ್ತು ಯತೀಶ್ ಕರ್ಕೇರ ಉಪಸ್ಥಿತರಿದ್ದರು. |