ಕೋವಿಡ್-19: ರಾಜ್ಯದಲ್ಲಿ ಇನ್ನು ಮುಂದೆ ಆಮ್ಲಜನಕ ಕೊರತೆ ಎದುರಾಗುವುದಿಲ್ಲ!

ಬೆಂಗಳೂರು: ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ರಾಜ್ಯಕ್ಕೆ ದಿನಕ್ಕೆ 400 ಟನ್ ದ್ರವೀಕೃತ ಆಮ್ಲಜನಕವನ್ನು ಪೂರೈಕೆ ಮಾಡಲು ಜಿಂದಾಲ್ ಒಪ್ಪಿಗೆ ನೀಡಿದ್ದು, ಇದರಿಂದ ಇನ್ನು ಮುಂದೆ ರಾಜ್ಯದಲ್ಲಿ ಆಮ್ಲಜನಕ ಕೊರತೆ ಎದುರಾಗುವುದಿಲ್ಲ ಎಂದು ಹೇಳಲಾಗುತ್ತಿದೆ. 

ಮಂಗಳವಾರ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ, ಸಚಿವ ಜಗದೀಶ್ ಶೆಟ್ಟರ್ ಅವರು, ಜೆಎಸ್‍ಡಬ್ಲ್ಯೂ ಸ್ಟೀಲ್ ಉಪ ವ್ಯವಸ್ಥಾಪಕ ನಿರ್ದೇಶಕ ಡಾ.ವಿನೋದ್ ನೋವಲ್ ನೇತೃತ್ವದ ಪ್ರತಿನಿಧಿಗಳ ಸಭೆ ಮಂಗಳವಾರ ನಡೆಯಿತು. 

ಸಭೆ ಬಳಿಕ ಜಿಂದಾಲ್ ರಾಜ್ಯಕ್ಕೆ ದಿನಕ್ಕೆ 400 ಟನ್ ದ್ರವೀಕೃತ ಆಮ್ಲಜನಕವನ್ನು ಪೂರೈಕೆ ಮಾಡಲು ಒಪ್ಪಿಗೆ ನೀಡಿದೆ ಎಂದು ತಿಳಿದುಬಂದಿದೆ. 

ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಪರಿಣಾಮವಾಗಿ ಅಪಾರ ಸಂಖ್ಯೆಯ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಿಂದಾಗಿ ತೀವ್ರ ನಿಗಾ ಘಟಕಗಳಲ್ಲಿ ದಾಖಲಾದ ರೋಗಿಗಳಿಗೆ ಆಮ್ಲಜನಕದ ಪೂರೈಕೆಯ ಕೊರತೆಯು ಗಂಭೀರ ಸ್ಥಿತಿಯಲ್ಲಿದೆ ಎಂದು ಸಭೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಲಾಯಿತು.

ಆಮ್ಲಜನಕದ ಪೂರೈಕೆಯ ಕೊರತೆಯಿಂದ ರಾಜ್ಯದ ಆರೋಗ್ಯ ವ್ಯವಸ್ಥೆಯಲ್ಲಿ ಏರುಪೇರು ಉಂಟಾಗಿದೆ. ರಾಜ್ಯದಲ್ಲಿ ಹದಗೆಟ್ಟ ಪರಿಸ್ಥಿತಿಯ ಮಧ್ಯೆ ಸಚಿವ ಮುರುಗೇಶ್ ನಿರಾಣಿ ಅವರು ಆಸ್ಪತ್ರೆಗಳಿಗೆ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸಬೇಕೆಂಬ ಬೇಡಿಕೆಯನ್ನು ಸಭೆಯಲ್ಲಿ ಮುಂದಿಟ್ಟರು.

ಉಕ್ಕಿನ ಉತ್ಪಾದನೆಯಲ್ಲಿ ಅವುಗಳ ಬಳಕೆಗಾಗಿ ತಮ್ಮ ಸಂಸ್ಥೆಗಳಲ್ಲಿ ದ್ರವೀಕೃತ ಆಮ್ಲಜನಕವನ್ನು ಉತ್ಪಾದಿಸುವ ಹಲವಾರು ಉಕ್ಕಿನ ಕಂಪನಿಗಳ ಪ್ರತಿನಿಧಿಗಳೊಂದಿಗೆ ಅವರು ಸಭೆ ನಡೆಸಿ ರಾಜ್ಯದ ವಸ್ತು ಸ್ಥಿತಿಯನ್ನು ಸಭೆಯ ಮುಂದಿಟ್ಟರು. 

ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಉಂಟಾಗುವ ಸಾರ್ವಜನಿಕ ಆರೋಗ್ಯ ಪರಿಸ್ಥಿತಿಯನ್ನು ಪರಿಹರಿಸಲು ಬೃಹತ್ ಪ್ರಮಾಣದಲ್ಲಿ ಆಮ್ಲಜನಕವನ್ನು ಉತ್ಪಾದಿಸುವ ಅಗತ್ಯವನ್ನು ಸಚಿವರು ಹೇಳಿದರು.

ಸಭೆಯಲ್ಲಿ ಹಾಜರಿದ್ದ ಜೆಎಸ್‍ಡಬ್ಲ್ಯು ಸ್ಟೀಲ್‍ನ ಉಪ ವ್ಯವಸ್ಥಾಪಕ ನಿರ್ದೇಶಕ ಡಾ.ವಿನೋದ್ ನೋವಲ್ ಅವರು, ದಿನಕ್ಕೆ 400 ಟನ್ ದ್ರವೀಕೃತ ಆಮ್ಲಜನಕವನ್ನು ಪೂರೈಸಲು ಸಮ್ಮತಿಸಿದರು. 

ಈ ಬಿಕ್ಕಟ್ಟನ್ನು ನಿಭಾಯಿಸಲು ಕರ್ನಾಟಕ ಸರ್ಕಾರಕ್ಕೆ ಎಲ್ಲ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು. ನಮ್ಮ ಕಂಪನಿಗಳ ಬದ್ಧತೆ ಕರ್ನಾಟಕದ ಕಡೆಗೆ. ಬೇಡಿಕೆ ಎದುರಾದರೆ ನಾವು ಹೆಚ್ಚು ಆಮ್ಲಜನಕವನ್ನು ಪೂರೈಸಲು ಸಿದ್ಧರಾಗಿದ್ದೇವೆ ಎಂದು ನೋವಲ್ ಸಭೆಯ ನಂತರ ಹೇಳಿದರು.

Leave a Reply

Your email address will not be published. Required fields are marked *

error: Content is protected !!