ಪರಿಸ್ಥಿತಿ ಕೈ ಮೀರಲು ಸರ್ಕಾರದ ನಿರ್ಲಕ್ಷ್ಯವೇ ಕಾರಣ: ತಾಂತ್ರಿಕ ಸಲಹಾ ಸಮಿತಿ ಅಸಮಾಧಾನ!
ಬೆಂಗಳೂರು: ತಾಂತ್ರಿಕ ಸಲಹಾ ಸಮಿತಿ ನೀಡಿದ್ದ ಎಚ್ಚರಿಕೆ ಮತ್ತು ಶಿಫಾರಸ್ಸುಗಳನ್ನು ಸರ್ಕಾರ ನಿರ್ಲಕ್ಷಿಸಿದ್ದರಿಂದಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೋವಿಡ್-19 ಪರಿಸ್ಥಿತಿ ಕೈಮೀರಿ ಹೋಗಿದೆ ಎಂದು ತಜ್ಞರು ಹೇಳಿದ್ದಾರೆ.
2020ರ ನವೆಂಬರ್ ನಲ್ಲೇ ತಾಂತ್ರಿಕ ಸಲಹಾ ಸಮಿತಿಯ ಬೆಂಗಳೂರಿನಲ್ಲಿ ಕೋವಿಡ್-19 2ನೇ ಅಲೆ ಮತ್ತು ಅದರ ಪರಿಣಾಮಗಳ ಕುರಿತು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು. ಅಲ್ಲದೆ ಈ ಸಂಬಂಧ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಮತ್ತು ಶಿಫಾರಸ್ಸುಗಳನ್ನು ಸರ್ಕಾರಕ್ಕೆ ನೀಡಿತ್ತು. ಆದರೆ ಸರ್ಕಾರ ಈ ಎಲ್ಲ ಶಿಫಾರಸ್ಸುಗಳನ್ನು ನಿರ್ಲಕ್ಷಿಸಿದ್ದರಿಂದಲೇ ಬೆಂಗಳೂರಿನಲ್ಲಿ ಕೋವಿಡ್-19 ಪರಿಸ್ಥಿತಿ ಕೈಮೀರಿ ಹೋಗಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ತಾಂತ್ರಿಕ ಸಲಹಾ ಸಮಿತಿಯಲ್ಲಿರುವ ಕೆಲ ಸದಸ್ಯರೂ ಕೂಡ ಸರ್ಕಾರದ ನಡೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ‘2020 ರ ನವೆಂಬರ್ 30 ರಂದು ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಲ್ಲಿಸಿದ ‘ಕರ್ನಾಟಕದ ಕೋವಿಡ್-19 ಎರಡನೇ ಅಲೆಯ ಶಿಫಾರಸು ಮತ್ತು ಧಾರಕ ಕ್ರಮಗಳ ಸಲಹೆ’ಗಳನ್ನು ಸರ್ಕಾರ ಕಡೆಗಣಿಸಿತ್ತು ಎಂದು ಹೇಳಿದ್ದಾರೆ. “ಜಿಲ್ಲಾ ಮಟ್ಟದಲ್ಲಿ ಏಳು ದಿನಗಳ ಸರಾಸರಿ ಬೆಳವಣಿಗೆಯ ದರ ಮತ್ತು ಸಕಾರಾತ್ಮಕ ಪ್ರಮಾಣ ಮತ್ತು ಸಂಖ್ಯೆಯನ್ನು ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡುವ ಮೂಲಕ ಎರಡನೇ ತರಂಗದ ಆರಂಭಿಕ ಗುರುತಿಸುವಿಕೆಯನ್ನು ಹೇಗೆ ಮಾಡಬಹುದೆಂದು ನಾವು ಸ್ಪಷ್ಟವಾಗಿ ವರದಿಯಲ್ಲಿ ಉಲ್ಲೇಖಿಸಿದ್ದೇವೆ. ರಾಜ್ಯದಲ್ಲಿ ಎರಡನೇ ಅಲೆಯನ್ನು ಜನವರಿಯಲ್ಲಿ ನಿರೀಕ್ಷಿಸಲಾಗಿದೆ ಎಂದು ಸಮಿತಿ ಸ್ಪಷ್ಟವಾಗಿ ಹೇಳಿತ್ತು.
ಫೆಬ್ರವರಿ 2021 ರ ಅಂತ್ಯದವರೆಗೆ ದಿನಕ್ಕೆ ಕನಿಷ್ಠ 1.25 ಲಕ್ಷ ಕೋವಿಡ್ ಪರೀಕ್ಷೆಗಳನ್ನು ನಡೆಸಬೇಕು, ಅದರಲ್ಲಿ 1 ಲಕ್ಷ ಆರ್ಟಿ-ಪಿಸಿಆರ್ ಆಗಿರಬೇಕು ಎಂದು ಶಿಫಾರಸ್ಸಿನಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಫೆಬ್ರವರಿಯಲ್ಲಿ, ಮಹಾರಾಷ್ಟ್ರದಲ್ಲಿ ಹೊಸ “ಡಬಲ್ ಮ್ಯುಟೆಂಟ್” ಪ್ರಕರಣಗಳು ತೀವ್ರವಾಗಿ ಏರುತ್ತಿರುವಾಗ, ಕರ್ನಾಟಕವು ಬಹಳ ಜಾಗರೂಕರಾಗಿರಬೇಕು ಮತ್ತು ಜೆನೋಮ್ ಸೀಕ್ವೆನ್ಸಿಂಗ್ (ಜಿಎಸ್) ಪರೀಕ್ಷಾ ಪ್ರಮಾಣವನ್ನು ಶೀಘ್ರದಲ್ಲಿಯೇ ಹೆಚ್ಚಿಸಬೇಕು ಎಂದು ನಾವು ಸ್ಪಷ್ಟವಾಗಿ ಹೇಳಿದ್ದೇವೆ. ಪ್ರಕರಣಗಳಲ್ಲಿ ಭಾರಿ ಏರಿಕೆ ಕಂಡುಬರುತ್ತಿತ್ತು. ಅದಾಗ್ಯೂ ಆದರೆ ಜಿಎಸ್ ಟೆಸ್ಟ್ ಗಳ ಸಂಖ್ಯೆ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳಲಿಲ್ಲ ಎಂದು ಹೇಳಿದ್ದಾರೆ.
ಮತ್ತೊಬ್ಬ ಹಿರಿಯ ತಜ್ಞರು ಮಾತನಾಡಿ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳನ್ನು ಪರಿಗಣಿಸುವಾಗ ಸರ್ಕಾರ ಕೈಗೊಂಡ ಕ್ರಮಗಳು ಸರಿ ಇರಲಿಲ್ಲ. ಶಿಫಾರಸ್ಸುಗಳ ಜಾರಿಯಲ್ಲಿ ಸರ್ಕಾರ ಹಲವು ಬಾರಿ ಯು-ಟರ್ನ್ ಹೊಡೆದಿತ್ತು ಎಂದು ಬೇಸರದಿಂದ ಹೇಳಿದ್ದಾರೆ. ಅಂತೆಯೇ ತಾಂತ್ರಿಕ ಸಲಹಾ ಸಮಿತಿ ನೀಡಿದ್ದ ಆ ಎಲ್ಲ ಎಸ್‌ಒಪಿಗಳ ಅನುಷ್ಠಾನದಿಂದಾಗಿ ಈಗ ಬಂದಿರುವ ಧಾರುಣ ಪರಿಸ್ಥಿತಿಯನ್ನು ತಡೆಯುತ್ತಿತ್ತು ಎಂದು ಹೇಳಿದ್ದಾರೆ.
ಪ್ರಮುಖವಾಗಿ ಕೋವಿಡ್ ಕ್ಲಸ್ಟರ್‌ಗಳನ್ನು ಗುರುತಿಸಲು ಶಿಕ್ಷಣ ಸಂಸ್ಥೆಗಳು ಮತ್ತು ಅಂಗನವಾಡಿ ಕೇಂದ್ರಗಳಲ್ಲಿನ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳ ಹದಿನೈದು ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿತ್ತು. ಆದರೆ ಈ ಶಿಫಾರಸ್ಸನ್ನು ಕೂಡ ಗಾಳಿಗೆ ತೂರಲಾಗಿತ್ತು.