3 ದಿನಗಳ ನಂತರ 10 ಭಾರತೀಯ ಯೋಧರ ಬಿಡುಗಡೆಗೊಳಿಸಿದ ಚೀನಾ!
ನವದೆಹಲಿ: ಪೂರ್ವ ಲಡಾಖ್’ನ ಗಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಸಂಘರ್ಷದ ವೇಳೆ ವಶಕ್ಕೆ ಪಡೆದುಕೊಂಡಿದ್ದ 2 ಮೇಜರ್ ಸೇರಿದಂತೆ 10 ಮಂದಿ ಭಾರತೀಯ ಯೋಧರನ್ನು ಚೀನಾ ಬಿಡುಗಡೆ ಮಾಡಿದೆ ಎಂದು ಶುಕ್ರವಾರ ತಿಳಿದುಬಂದಿದೆ.
ಸೋಮವಾರದ ಘಟನೆ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಉಭಯ ರಾಷ್ಟ್ರಗಳ ಸೇನಾಧಿಕಾರಿಗಳು ಹಲವು ಸುತ್ತಿನ ಮಾತುಕತೆ ನಡೆಸಿದ್ದು, ಈ ಬೆಳವಣಿಗೆ ನಡುವಲ್ಲೇ ಚೀನಾ 10 ಮಂದಿ ಭಾರತೀಯ ಯೋಧರನ್ನು ಬಿಡುಗಡೆ ಮಾಡಿದೆ.
ಗಡಿಯಲ್ಲಿ ನಡೆದ ಸಂಘರ್ಷದಲ್ಲಿ ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಯೋಧರು ಇದೀಗ ಚೇತರಿಸಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಸಂಘರ್ಷದ ವೇಳೆ ಗಡಿಯಲ್ಲಿ ಭದ್ರತೆಗೆ ನಿಯೋಜನೆಗೊಂಡು, ಸಣ್ಣ ಪುಟ್ಟ ಗಾಯಗಳನ್ನು ಅನುಭವಿಸಿದ್ದ 58 ಮಂದಿ ಯೋಧರು ಇನ್ನೊಂದು ವಾರ ಅಥವಾ 10 ದಿನಗಳಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಹಾಗೂ ಯಾವುದೇ ಯೋಧರೂ ನಾಪತ್ತೆಯಾಗಿಲ್ಲ ಎಂದು ಸೇನೆ ತನ್ನ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.
ಸಂಘರ್ಷದ ಬಳಿಕ ಭಾರತೀಯ ಸೇನೆ ಲಡಾಖ್ ಕಣಿವೆಯಲ್ಲಿ ತೀವ್ರ ಕಟ್ಟೆಚ್ಚರವಹಿಸಿದೆ. ಲೇಹ್’ನ ಕೋರ್ ಕಮಾಂಡರ್ ಪ್ರತಿ ಗಂಟೆಗೊಮ್ಮೆ ಪರಿಸ್ಥಿತಿಯ ಕುರಿತು ಹಿರಿಯ ಅಧಿಕಾರಿಗಳಿಗೆ ಮಾಹಿತಿ ರವಾನಿಸುತ್ತಿದ್ದಾರೆ. ಲಡಾಖ್’ನಿಂದ ಅರುಣಾಚಲಪ್ರದೇಶದವರಿನ 3488 ಕಿಮೀ ಉದ್ದದ ಗಡಿಗುಂಟ ಯುದ್ಧ ಅಲರ್ಟ್ ಅನ್ನು ಭಾರತ ಘೋಷಿಸಿದೆ.