ಮಾರ್ಗ ಮಧ್ಯ ವಿದ್ಯಾರ್ಥಿನಿಯರನ್ನು ಬಸ್’ನಲ್ಲಿ ಇಳಿಸಿದ ಡಿಸಿ: ಸಾರ್ವಜನಿಕರ ವ್ಯಾಪಕ ಆಕ್ರೋಶ-ವಿಡಿಯೋ ವೈರಲ್!
ಉಡುಪಿ.ಎ.20(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಏರುತ್ತಿರುವುದನ್ನು ತಡೆಯುವ ನಿಟ್ಟಿನಲ್ಲಿ ಕೋವಿಡ್ ನಿಯಮ ಉಲ್ಲಂಘಿಸುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಸಲುವಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಸೋಮವಾರ ಸಂಜೆ ಕಾರ್ಯಾಚರಣೆ ನಡೆಸಿ ಬಸ್ ಗಳಲ್ಲಿ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವ ಬಗ್ಗೆ ಖಾತರಿಸಿ ಪಡಿಸಿ ನಿಯಮ ಉಲ್ಲಂಘಿಸಿದವರನ್ನು ತರಾಟೆಗೆ ತೆಗೆದುಕೊಂಡು ಬಸ್ನಲ್ಲಿ ಅಗತ್ಯಕ್ಕಿಂತ ಹೆಚ್ಚು ಇದ್ದ ಪ್ರಯಾಣಿಕರನ್ನು ಮಾರ್ಗದಲ್ಲೇ ಇಳಿಸಲಾಯಿತು.
ಇದೀಗ ಮಾರ್ಗ ಮಧ್ಯದಲ್ಲಿ ಇಳಿದುಕೊಂಡ ವಿದ್ಯಾರ್ಥಿನಿಯೊಬ್ಬಳು ತನ್ನ ಅಳಲನ್ನು ಮಾಧ್ಯಮದ ಮುಂದೆ ಹೇಳಿಕೊಂಡಿದ್ದು ವಿದ್ಯಾರ್ಥಿನಿಯ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದೆ.
ಸೆಮಿಸ್ಟರ್ ಪರೀಕ್ಷೆ ಇದ್ದ ಕಾರಣ ನಾವು ಉಡುಪಿಗೆ ಬಂದಿದ್ದೇವೆ. ಕೊರೋನಾ ಕಾರಣ ಸಾಮಾಜಿಕ ಅಂತರ ಎಂದು ಹೇಳಿ ನಮ್ಮನ್ನು ಬಸ್ಸಿನಿಂದ ಇಳಿಸಿ ಮಾರ್ಗ ಮಧ್ಯದಲ್ಲೇ ಬಿಟ್ಟು ಹೋಗಿದ್ದಾರೆ. ಕೇಳಿದರೆ ಮುಂದಿನ ಬಸ್ನಲ್ಲಿ ಹೋಗುವಂತೆ ಸೂಚಿಸಿದ್ದಾರೆ.
ನಾವು ಹಳ್ಳಿಯಿಂದ ಬರುವವರು ಅಲ್ಲಿಗೆ ಅರ್ಧ ಗಂಟೆಗೊಮ್ಮೆ ಬಸ್ ಬರುತ್ತದೆ. ಸಂಜೆ ಹೊತ್ತು ಆದ್ದರಿಂದ ಪ್ರತೀ ಬಸ್ ನಲ್ಲಿಯೂ ಪ್ರಯಾಣಿಕರು ತುಂಬಿರುತ್ತಾರೆ. ಹೀಗಿರುವಾಗ ಹೇಗೆ ಮನೆಗೆ ಹೋಗುವುದು. ನಾವು ತಡವಾಗಿ ಹೋದರೆ ನಮ್ಮನ್ನು ಕೇಳುವವರು ಇಲ್ಲವೆ ಎಂದು ಪ್ರಶ್ನಿಸಿದ್ದಾರೆ.
ಇದೀಗ ವಿದ್ಯಾರ್ಥಿನಿಯ ಹೇಳಿಕೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಕೊರೋನಾ ಕಾರಣ ನೀಡಿ ಪ್ರಯಾಣಿಕರನ್ನು ಅರ್ಧ ದಾರಿಯಲ್ಲಿಯೇ ಇಳಿಸಿದ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಉಡುಪಿ-ಬಾರ್ಕೂರು-ಹಾಲಾಡಿ-ಸಿದ್ದಾಪುರ ಮಾರ್ಗದಲ್ಲಿ ಅರ್ಧ ಗಂಟೆಗೊಮ್ಮೆ ಬಸ್ಸಿರುವಾಗ ಸಂಜೆ ಕಾಲೇಜು ಬಿಟ್ಟು ಮನೆಗೆ ಹೋಗುವ ವಿದ್ಯಾರ್ಥಿಗಳನ್ನ (ಹುಡುಗಿಯರು) ಅರ್ಧ ದಾರಿಯಲ್ಲೇ ಇಳಿಸಿ ಬದಲಿ ವ್ಯವಸ್ಥೆ ಮಾಡದ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತವಾಗಿದೆ.
ಅಲ್ಲದೆ ಡಿಪೋದಲ್ಲಿ ತುಕ್ಕು ಹಿಡಿಯುತ್ತಿರುವ ಸರಕಾರಿ ಬಸ್ ಸಂಚಾರಕ್ಕೆ ಬಿಡುವಂತೆಯೂ ಸಾರ್ವಜನಿಕರು ಆಗ್ರಹಿಸಿದ್ದಾರೆ.