ವಲಸೆ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಹಣ ಹಾಕುವುದು ಸರ್ಕಾರದ ಜವಾಬ್ದಾರಿ: ರಾಹುಲ್ ಗಾಂಧಿ
ನವದೆಹಲಿ: ವಲಸೆ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಹಣ ಹಾಕುವುದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮಂಗಳವಾರ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ ಸೋಮವಾರ ರಾತ್ರಿಯಿಂದ ಆರು ದಿನಗಳ ಕಾಲ ಲಾಕ್ಡೌನ್ ಘೋಷಿಸಿದ ನಂತರ, ಸಾವಿರಾರು ಕಾರ್ಮಿಕರು ಸಂಕಷ್ಟದಲ್ಲಿ ಸಿಲುಕಿದ್ದು, ಕೇಂದ್ರ ಸರ್ಕಾರ ಅವರೆಲ್ಲರಿಗೂ ಆರ್ಥಿಕ ನೆರವು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಲಾಕ್ಡೌನ್ ಘೋಷಣೆಯಾಗುತ್ತಿದ್ದಂತೆ ಸಾವಿರಾರು ಮಂದಿ ವಲಸೆ ಕಾರ್ಮಿಕರು ಸೋಮವಾರ ತಮ್ಮ ತಮ್ಮ ಊರುಗಳಿಗೆ ತೆರಳಲು ದೆಹಲಿಯ ಆನಂದ ವಿಹಾರ ಬಸ್ ಟರ್ಮಿನಲ್ ಬಳಿ ಜಮಾಯಿಸಿದ್ದರು. ಕೆಲಸವೂ ಇಲ್ಲದೇ, ದುಡಿಮೆಯಿಲ್ಲದೇ ಸಂಕಷ್ಟ ಎದುರಿಸುತ್ತಿರುವ ಈ ವಲಸೆ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಹಣ ಹಾಕುವುದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ಹೇಳಿದ್ದಾರೆ.
‘ಒಂದು ಕಡೆ ಕಾರ್ಮಿಕರು ವಲಸೆ ಹೊರಟಿದ್ದರೆ, ಮತ್ತೊಂದೆಡೆ ಸರ್ಕಾರವು ಜನರೇ ಕೊರೋನಾ ಸೋಂಕನ್ನು ಹರಡುತ್ತಿದ್ದಾರೆ ಎಂದು ದೂರುತ್ತಿದೆ. ಇಂಥ ಸರ್ಕಾರದಿಂದ ಸಾರ್ವಜನಿಕರಿಗೆ ನೆರವು ಸಿಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಈ ನಡುವೆ ರಾಷ್ಟ್ರೀಯ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಭಯಾನಕ ಕೋವಿಡ್ 19 ಪರಿಸ್ಥಿತಿಯನ್ನು ಗಮನಿಸಿದರೆ, ಸರ್ಕಾರವು ಲಾಕ್ ಡೌನ್ ಹೇರುವಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿರುವುದು ಸ್ಪಷ್ಟವಾಗಿದೆ, ಆದರೆ, ವಲಸೆ ಕಾರ್ಮಿಕರು ಮತ್ತೊಮ್ಮೆ ಕಳೆದ ಬಾರಿಯ ಸಮಸ್ಯೆಯನ್ನೇ ಎದುರಿಸಬೇಕಾಗುತ್ತದೆ. ಇದು ನಿಮ್ಮ ಯೋಜನೆಯೇ ? ನೀತಿಗಳು ಎಲ್ಲರನ್ನೂ ನೋಡಿಕೊಳ್ಳುವಂತಹದ್ದಾಗಿರಬೇಕು ಬಡವರು, ಕಾರ್ಮಿಕರು ಮತ್ತು ಬೀದಿ ವ್ಯಾಪಾರಿಗಳಿಗೆ ಹಣಕಾಸಿನ ನೆರವು ಅವಶ್ಯಕತೆಯಾಗಿದೆ. ದಯವಿಟ್ಟು ಇದನ್ನು ಮಾಡಿ ”ಎಂದು ಅವರು ಹಿಂದಿಯಲ್ಲಿ ಮಾಡಿದ ಟ್ವೀಟ್ನಲ್ಲಿ ತಿಳಿಸಿದ್ದಾರೆ.