ರಾಜ್ಯಪಾಲರ ನೇತೃತ್ವದಲ್ಲಿ ಸಭೆ -ಕಠಿಣ ನಿಯಮಗಳ ಜಾರಿ ಬಗ್ಗೆ ನಿರ್ಧಾರ?
ಬೆಂಗಳೂರು ಎ.20: ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಕುರಿತು ಸರಕಾರ ಜಾರಿ ಮಾಡುವ ಕಠಿಣ ನಿಯಮಗಳ ಜೊತೆ ವಿಪಕ್ಷಗಳು ಕೈ ಜೋಡಿಸಬೇಕು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ನಿನ್ನೆ ಸಿಎಂ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ವಿಪಕ್ಷ ನಾಯಕರು ಲಾಕ್ ಡೌನ್ ಬೇಡವೇ ಬೇಡ ಅದರ ಬದಲು ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರು, ಇದೊಂದು ಸಾಂಕ್ರಾಮಿಕ ರೋಗ ಇದನ್ನು ಪರಿಶ್ರಮ ಹಾಕಿ ತಡೆಯಬೇಕು ಹಾಗಾಗಿ ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಪ್ರತಿಪಕ್ಷಗಳು ಹೇಳಿದ್ದನ್ನೆಲ್ಲಾ ಅಲ್ಲಗಳೆಯಲು ಆಗುವುದಿಲ್ಲ. ಮುಂದುವರೆದ ದೇಶಗಳಲ್ಲೂ ಹೆಚ್ಚು ಸಾವುಗಳಾಗಿವೆ. ಹಾಗೆಂದು ಅಲ್ಲಿನ ಸರಕಾರಗಳು ವಿಫಲ ಅಂತ ಹೇಳಬಹುದಾ? ಹಾಗೆ ಹೇಳಲು ಆಗುವುದಿಲ್ಲ. ಸದ್ಯದ ಕ್ರಮಗಳು ಸಾಕಾಗುತ್ತಿಲ್ಲ ಎನ್ನುವುದನ್ನು ಒಪ್ಪುತ್ತೇನೆ. ಆರೋಗ್ಯ ಮೂಲಭೂತ ಸೌಕರ್ಯ ಒದಗಿಸಿದ್ದೀವಿ ಆದರೆ ಓವರ್ ನೈಟ್ ವೈದ್ಯರನ್ನು ಸೃಷ್ಟಿಸಲು ಆಗುವುದಿಲ್ಲ ಎಂದರು.
ಇನ್ನು ಈ ಬಗ್ಗೆ ಇಂದು ರಾಜ್ಯಪಾಲರ ನೇತೃತ್ವದಲ್ಲಿ ಸಭೆ ನಡೆಯಲಿದ್ದು ಈ ಸಭೆಯಲ್ಲಿ ಕಠಿಣ ನಿಯಮಗಳ ಜಾರಿ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಈ ವೇಳೆ ಸರ್ಕಾರದ ಜೊತೆ ವಿರೋಧ ಪಕ್ಷಗಳೂ ಬೆಂಬಲಕ್ಕೆ ನಿಲ್ಲಬೇಕು. ಜನರು ಗುಂಪು ಸೇರುತ್ತಿರುವುದರಿಂದಲೇ ಕೋವಿಡ್ ಸಂಖ್ಯೆ ಹೆಚ್ಚಾಗುತ್ತಿದೆ ಆದ್ದರಿಂದ ಜನರು ಗುಂಪು ಸೇರಬಾರದು. ಕ್ಲೋಸ್ಡ್ ಸಕ್ರ್ಯೂಟ್ ನಲ್ಲಿ ಗುಂಪಿದ್ರೆ ಗಾಳಿ ಮೂಲಕವೂ ವೈರಸ್ ಹರಡುತ್ತದೆ. ಅಲ್ಲದೆ ಡ್ರಾಪ್ ಲೆಟ್ ಗಳ ಮೂಲಕವೂ ಹರಡುತ್ತದೆ. ಇದಕ್ಕೆ ಕಡಿವಾಣ ಹಾಕಲು ಕಠಿಣ ನಿಯಮಗಳನ್ನು ಜಾರಿ ಮಾಡುವ ಅವಶ್ಯಕತೆ ಇದೆ.
ಬೆಂಗಳೂರಿನಲ್ಲಿ ಶೇ.70 ರಷ್ಟು ಪ್ರಕರಣಗಳು ಕಂಡು ಬರುತ್ತಿವೆ. ಬೆಂಗಳೂರು ಕರ್ನಾಟಕದ ಎಪಿಸೆಂಟರ್ ಆಗಿರುವುದರಿಂದ ಬೆಂಗಳೂರಿಗೆ ಪ್ರತ್ಯೇಕ ನಿಯಮ ಮಾಡಬೇಕಾಗುತ್ತದೆ ಇಲ್ಲಿಂದ ಹೊರಗೆ ಹೋಗುವ ಜನ ಬೇರೆ ಜಿಲ್ಲೆಗಳಲ್ಲಿ ಸೋಂಕು ಹರಡಿಸಬಹುದು. ಆದ್ದರಿಂದ ಉಳಿದ ಏಳು ಜಿಲ್ಲೆಗಳಲ್ಲಿ ಯಾವ ನಿಯಮ ತರಬೇಕು ಎಂಬುದಾಗಿಯೂ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.