ಕೋವಿಡ್ ಸೋಂಕು ಪ್ರಕರಣ ತೀವ್ರ ಏರಿಕೆ- ಐಸಿಎಸ್ಇ 10ನೇ ತರಗತಿ ಪರೀಕ್ಷೆ ರದ್ದು
ನವದೆಹಲಿ: ದೇಶದಾದ್ಯಂತ ಕೋವಿಡ್ ಸೋಂಕು ಪ್ರಕರಣಗಳು ತೀವ್ರವಾಗಿ ಏರಿಕೆಯಾಗುತ್ತಿರುವ ಕಾರಣ ಐಸಿಎಸ್ಇ ಹತ್ತನೇ ತರಗತಿ ಪರೀಕ್ಷೆ ರದ್ದುಗೊಳಿಸಲಾಗಿದೆ.
12ನೇ ತರಗತಿ ಪರೀಕ್ಷೆ ಮುಂದೂಡಲಾಗಿದ್ದು, ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಸಿಐಎಸ್ಸಿಇ ಸುತ್ತೋಲೆ ತಿಳಿಸಿದೆ. ವಿದ್ಯಾರ್ಥಿಗಳ ಮತ್ತು ಬೋಧನಾ ಸಿಬ್ಬಂದಿಯ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಏಪ್ರಿಲ್ 16ರಂದೇ ಸಿಐಎಸ್ಸಿಇ ತಿಳಿಸಿತ್ತು. ಆದರೆ, ಹತ್ತನೇ ತರಗತಿ ಪರೀಕ್ಷೆ ರದ್ದುಗೊಳಿಸುವುದಾಗಿ ಹೇಳಿರಲಿಲ್ಲ. ಪರೀಕ್ಷೆ ನಡೆಸಲಾಗುವುದು. ಜತೆಗೆ, ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗದೇ ಇರುವ ಆಯ್ಕೆಯನ್ನೂ ನೀಡಲಾಗುವುದು. ಪರೀಕ್ಷೆಗೆ ಹಾಜರಾಗದೇ ಇರುವ ವಿದ್ಯಾರ್ಥಿಗಳ ಫಲಿತಾಂಶಕ್ಕಾಗಿ ವಸ್ತುನಿಷ್ಠ ಮಾನದಂಡವೊಂದನ್ನು ಸಿದ್ಧಪಡಿಸಲಾಗುವುದು ಎಂದು ತಿಳಿಸಿತ್ತು. ಆದರೆ ಇದೀಗ ಕೋವಿಡ್ ಮತ್ತಷ್ಟು ಉಲ್ಬಣಗೊಳ್ಳುತ್ತಿರುವುದರಿಂದ ನಿರ್ಧಾರ ಬದಲಿಸಿದೆ.
ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್ಇ) ಸಹ ಈಗಾಗಲೇ ಹತ್ತನೇ ತರಗತಿಯ ಪರೀಕ್ಷೆಯನ್ನು ರದ್ದು ಮಾಡಿದ್ದು, 12ನೇ ತರಗತಿ ಪರೀಕ್ಷೆಯನ್ನು ಮುಂದೂಡಿದೆ