ಭಾರತೀಯ ಸೈನಿಕರು ಕಣ್ಮರೆಯಾಗಿಲ್ಲ: ಭಾರತೀಯ ಸೇನೆ ಸ್ಪಷ್ಟನೆ
ನವದೆಹಲಿ: 20 ಸೈನಿಕರ ಸಾವಿಗೆ ಕಾರಣವಾದ ಗಾಲ್ವಾನ್ ಸಂಘರ್ಷದ ಸಂದರ್ಭದಲ್ಲಿ ಭಾರತದ ಯಾವುದೇ ಸೈನಿಕನೂ ಕಣ್ಮರೆಯಾಗಿಲ್ಲ ಎಂದು ಭಾರತೀಯ ಸೇನೆ ಸ್ಫಷ್ಟಪಡಿಸಿದೆ.
ಲಡಾಖ್ ನ ಗಾಲ್ವಾನ್ ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಸಂಘರ್ಷದಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರೆ, ಅತ್ತ ಚೀನಾದ 35ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ್ದರು. ಇದೇ ಸಂದರ್ಭದಲ್ಲಿ ಚೀನಾ ಸೈನಿಕರು ಭಾರತದ 15ಕ್ಕೂ ಹೆಚ್ಚು ಸೈನಿಕರನ್ನು ಬಂಧಿಸಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್ ಟೈಮ್ಸ್ ಕೂಡ ವರದಿ ಮಾಡಿತ್ತು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ಸೇನಾಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಚೀನಾ ಭಾರತ ಗಡಿಯಲ್ಲಿ ನಡೆದ ಘಟನೆಯಲ್ಲಿ ಯಾವುದೇ ಸೈನಿಕ ದಳ ಕಣ್ಮರೆಯಾಗಿಲ್ಲ. ಎಣಿಕೆ ಪ್ರಕಾರ ನಮ್ಮ ಸೈನಿಕರು ಯಾರೂ ಘಟನೆಯಲ್ಲಿ ಕಣ್ಮರೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಇನ್ನು ಇದೇ ವಿಚಾರವಾಗಿ ನಿನ್ನೆ ಮಾತನಾಡಿದ್ದ ಪ್ರಧಾನಿ ಮೋದಿ, ಭಾರತ ಶಾಂತಿಯನ್ನು ಬಯಸುತ್ತದೆ ಆದರೆ ಪ್ರಚೋದಿಸಿದಾಗ, ಯಾವುದೇ ರೀತಿಯ ಪರಿಸ್ಥಿತಿ ಇರಲಿ ಭಾರತ ಅದಕ್ಕೆ ಸೂಕ್ತ ತಿರುಗೇಟು ನೀಡಲು ಸಮರ್ಥವಾಗಿದೆ. ಈ ಮೂಲಕ ನಾನು ದೇಶದ ಪ್ರಜೆಗಳಿಗೆ ಭರವಸೆ ನೀಡುತ್ತೇನೆ. ಅದೇನೆಂದರೆ ಸೈನಿಕರ ಬಲಿದಾನ ವ್ಯರ್ಥವಾಗದು. ನಮಗೆ, ದೇಶದ ಏಕತೆ ಮತ್ತು ಸಾರ್ವಭೌಮತ್ವ ಅತ್ಯಂತ ಮುಖ್ಯವಾದದ್ದು. ಆದಕೆ ಪ್ರಚೋದಿಸಿದರೆ ಅದಕ್ಕೆ ತಕ್ಕ ಶಾಸ್ತಿ ಖಂಡಿತ ಮಾಡುತ್ತೇವೆ ಎಂದು ಹೇಳಿದ್ದರು