ದುಬೈಗೆ ಭಾರತದಿಂದ ತೆರಳುವ ಪ್ರಯಾಣಿಕರ ಕೋವಿಡ್ ಟೆಸ್ಟ್ ಪ್ರಮಾಣ ಪತ್ರದ ಅವಧಿ ಕಡಿತ
ಮಂಗಳೂರು ಎ.19: ದುಬೈಗೆ ಭಾರತದಿಂದ ತೆರಳುವ ಪ್ರಯಾಣಿಕರು ಹೊಂದಿರಬೇಕಾದ ಕೋವಿಡ್ ಟೆಸ್ಟ್ ಪ್ರಮಾಣ ಪತ್ರದ ಅವಧಿಯನ್ನು ಕಡಿತಗೊಳಿಸಲಾಗಿದೆ. ಇದೀಗ ಪ್ರಯಾಣಿಕರು ಹೊಂದಿರಬೇಕಾಗಿದ್ದ ಕೋವಿಡ್ ಟೆಸ್ಟ್ ನ ಪ್ರಮಾಣ ಪತ್ರದ ಅವಧಿಯನ್ನು 72 ಗಂಟೆಯಿಂದ 48 ಗಂಟೆಗೆ ಇಳಿಸಲಾಗಿದೆ ಎಂದು ತಿಳಿದು ಬಂದಿದೆ.
ಕೊರೋನ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರ ಈ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು, ಅದರಂತೆ, ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರವು ನೀಡಿರುವ ಮಾಹಿತಿ ಪ್ರಕಾರ ಈ ನಿಯಮ ಎ.22ರಿಂದ ಕಡ್ಡಾಯವಾಗಿ ಅನ್ವಯವಾಗಲಿದೆ.
ಭಾರತದ ಯಾವುದೇ ವಿಮಾನ ನಿಲ್ದಾಣದಿಂದ ದುಬೈಗೆ ಪ್ರಯಾಣಿಕರನ್ನು ಕರೆತರುವ ವೇಳೆ ಅವರಲ್ಲಿ ಸ್ಯಾಂಪಲ್ ಸಂಗ್ರಹಿಸುವುದರಿಂದ 48 ಗಂಟೆ ಮೀರದ ಅಧಿಕೃತ ಕೋವಿಡ್ ಟೆಸ್ಟ್ ಪ್ರಮಾಣಪತ್ರ ಬೇಕು ಎಂದು ತಿಳಿಸಲಾಗಿದೆ. ಅಲ್ಲದೆ ಸ್ಯಾಂಪಲ್ ಸಂಗ್ರಹದ ದಿನಾಂಕ ಹಾಗೂ ಸಮಯ ಮತ್ತು ವರದಿ ಸಿಕ್ಕಿದ ದಿನ ಹಾಗೂ ಸಮಯವು ಸರಿಯಾಗಿ ನಮೂದಿಸಿರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಇದೇ ವೇಳೆ ಕೋವಿಡ್ ಹರಡುವುದನ್ನು ತಪ್ಪಿಸಲು ಪ್ರಯಾಣಿಕರು ಸಹಕರಿಸಬೇಕು ಎಂದು ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರ ಮನವಿ ಮಾಡಿದೆ.