ಚೇರ್ಕಾಡಿ: ಕೋಳಿ ವ್ಯಾಪಾರಿಗೆ ರೂ.1.62 ಲಕ್ಷ ವಂಚನೆ
ಬ್ರಹ್ಮಾವರ ಎ.19(ಉಡುಪಿ ಟೈಮ್ಸ್ ವರದಿ): ಕೋಳಿ ವ್ಯಾಪಾರ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರಿಗೆ ವಂಚಿಸಿರುವ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ. ಈ ಬಗ್ಗೆ ಅಮಿತ್ ಶೆಟ್ಟಿ ಎಂಬವರು ದೂರು ನೀಡಿದ್ದು, ಅವರು ನೀಡಿರುವ ದೂರಿನ ಪ್ರಕಾರ ಚೇರ್ಕಾಡಿಯ ಅಮಿತ್ ಶೆಟ್ಟಿ ಇವರು ಕೃಷಿ, ಹೈನುಗಾರಿಕೆ ಮತ್ತು ಕೋಳಿ ಸಾಕಣಿಕೆ ಉದ್ಯೋಗ ಮಾಡಿಕೊಂಡಿದ್ದಾರೆ. ಹೀಗಿರುವಾಗ ಅವರ ಪರಿಚಯದ ಬೆಳಗಾವಿಯಲ್ಲಿ ಎಚ್.ಜಿ.ಕೆ ಆಗ್ರ್ಯಾನಿಕ್ ಪ್ರೈ.ಲಿ ಎಂಬ ಸಂಸ್ಥೆ ನಡೆಸಿಕೊಂಡಿರುವ ಹರೀಶ್ ದಾರಪ್ಪ ಕೊಟೂರ್ ಎಂಬಾತ 2020 ರಲ್ಲಿ ಅಮಿತ್ ಶೆಟ್ಟಿ ರವರ ಮನೆಗೆ ಬಂದು ತಾನು ಕೋಳಿ ವ್ಯವಹಾರದ ಸಂಸ್ಥೆಯನ್ನು ಬೆಳಗಾವಿಯಲ್ಲಿ ನಡೆಸಿಕೊಂಡಿದ್ದು, ಬೇಕಾದವರಿಗೆ ಕೋಳಿ ಪೂರೈಕೆ ಮಾಡುತ್ತಿರುವುದಾಗಿ ತಿಳಿಸಿದ್ದಾನೆ.
ಅಲ್ಲದೆ ಕೋಳಿ ಪಡೆದುಕೊಂಡವರು ಅದನ್ನು ಸಾಕಿ ಅದರ ಮೊಟ್ಟೆಗಳನ್ನು ತಮ್ಮ ಸಂಸ್ಥೆಗೆ ಪೂರೈಕೆ ಮಾಡಿದರೆ ಯೋಗ್ಯ ಬೆಲೆ ಕೊಡಲಾಗುತ್ತದೆ. ಬಳಿಕ 10 ತಿಂಗಳು ಕಳೆದ ನಂತರ ಈ ಕೋಳಿಗಳನ್ನು ವಾಪಾಸ್ಸು ಪಡೆಯುವುದಾಗಿಯೂ ತಿಳಿಸಿದ್ದಾನೆ. ಈ ವ್ಯವಹಾರ ಅಮಿತ್ ಶೆಟ್ಟಿ ರವರಿಗೆ ಇಷ್ಟವಾಗಿ ಆರೋಪಿಯೊಂದಿಗೆ ಪರಸ್ಪರ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಆರೋಪಿಯು ಅಮಿತ್ ಶೆಟ್ಟಿ ರವರಿಗೆ 900 ಕೋಳಿಗಳನ್ನು ಪೂರೈಕೆ ಮಾಡವುದಾಗಿ ತಿಳಿಸಿದ್ದು, ಅದರಂತೆ ಒಂದು ಕೋಳಿಗೆ ರೂಪಾಯಿ 400 ರಂತೆ ಒಟ್ಟು 3,24,000 ರೂ ಹಣವನ್ನು ಪಾವತಿಸುವಂತೆ 2020ರ ಫೆ.8 ರಂದು ಕರಾರು ಪತ್ರ ಮಾಡಿಕೊಂಡಿದ್ದರು. ನಂತರ ಆರೋಪಿಯು ಅಮಿತ್ ಶೆಟ್ಟಿ ರವರಿಗೆ ಕೂಡಲೇ ಅರ್ಧದಷ್ಟು ಹಣವನ್ನು ಖಾತೆಗೆ ಹಾಕುವಂತೆ ಮತ್ತು ತಾನು ಬೆಳಗಾವಿಗೆ ಹೋದ ನಂತರ ಕೋಳಿಗಳನ್ನು ಪೂರೈಕೆ ಮಾಡುವುದಾಗಿ ತಿಳಿಸಿದ್ದು, ಅಲ್ಲದೆ ಕೋಳಿಗಳನ್ನು ಪೂರೈಕೆ ಮಾಡಿದ ನಂತರ ಬಾಕಿ ಹಣವನ್ನು ಪಾವತಿಸುವಂತೆ ತಿಳಿಸಿದ್ದಾನೆ.
ಈ ಒಪ್ಪಂದದ ಪ್ರಕಾರ 2020ರ ಫೆ.10 ರಂದು ಆರೋಪಿಯ ಖಾತೆಗೆ 1,62,000 ರೂ ಹಣವನ್ನು ಅಮಿತ್ ಶೆಟ್ಟಿ ರವರು ಪಾವತಿ ಮಾಡಿರುತ್ತಾರೆ. ಆದರೆ ಅಮಿತ್ ಶೆಟ್ಟಿ ರವರಿಗೆ ಇದುವರೆಗೆ ಅಂದರೆ 8 ತಿಂಗಳಾದರೂ ಕೋಳಿಗಳನ್ನು ಪೂರೈಕೆ ಮಾಡಿರುವುದಿಲ್ಲ. ಅಲ್ಲದೇ ಈ ಬಗ್ಗೆ ಕೇಳಿದಾಗ ಆರೋಪಿಯು ಅಮಿತ್ ಶೆಟ್ಟಿ ರವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿರುತ್ತಾನೆ. ಆರೋಪಿಯು ಹಣ ಪಡೆದು, ಕೋಳಿ ಪೂರೈಕೆ ಮಾಡುವುದಾಗಿ ಹೇಳಿ ವಂಚಿಸಿರುವುದಾಗಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.