ಬ್ರಹ್ಮಾವರ: ಮನೆ ನಿವೇಶನ ನೀಡುವುದಾಗಿ ಪೊಲೀಸ್ ಪೇದೆಗೆ ವಂಚನೆ!
ಬ್ರಹ್ಮಾವರ, ಎ.19(ಉಡುಪಿ ಟೈಮ್ಸ್ ವರದಿ): ಮನೆ ನಿವೇಶನ ಮಾರಾಟಕ್ಕೆ ಸಂಬಂಧಿಸಿ ಪೊಲೀಸರಿಗೆ ವಂಚಿಸಿರುವ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ.
ಈ ಬಗ್ಗೆ ವಂಚನೆಗೆ ಒಳಗಾದ ಸತೀಶ ಬ್ರಹ್ಮಾವರ ಠಾಣೆಗೆ ದೂರು ನೀಡಿದ್ದು, ಸತೀಶ ಅವರು ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ಸ್ವಂತ ಮನೆ ಕಟ್ಟುವ ಉದ್ದೇಶದಿಂದ ಸೂಕ್ತ ನಿವೇಶನ ಹುಡುಕುತ್ತಿದ್ದರು. ಈ ವೇಳೆ ಬ್ರಹ್ಮಾವರದ ಜಯಂತ ಎಂಬಾತ ಸತೀಶ ಅವರನ್ನು ಸಂಪರ್ಕಿಸಿ ಹಂದಾಡಿ ಗ್ರಾಮದಲ್ಲಿರುವ ನಿವೇಶನವನ್ನು ಮಾರಾಟ ಮಾಡುವುದಾಗಿ ತಿಳಿಸಿದ್ದರು.
ಇದನ್ನು ನಂಬಿದ ಸತೀಶ್ ಹಾಗೂ ಅವರ ಪತ್ನಿ ಈ ನಿವೇಶನಕ್ಕೆ ಒಟ್ಟು 7,20,000 ರೂ.ಗೆ 2017ರ ಜೂ.13 ರಂದು ಕರಾರು ಪತ್ರ ಮಾಡಿಕೊಂಡಿದ್ದರು. ಅದರಂತೆ ಸತೀಶ ಮುಂಗಡ ಹಣವನ್ನಾಗಿ 3,00,000 ರೂ. ನೀಡಿ, ನಂತರ ಅದೇ ವರ್ಷ ಅ.2 ರಂದು 1,20,000 ರೂ ನೀಡಿರುತ್ತಾರೆ. ಕರಾರು ಪತ್ರದ ಪ್ರಕಾರ ಆರೋಪಿ ಜಯಂತ ಅ.13 ರ ಮೊದಲು ಸತೀಶಗೆ ಈ ನಿವೇಶನವನ್ನು ನೊಂದಣಿ ಮಾಡಿ ಕೊಡಬೇಕಾಗಿತ್ತು.
ಆದರೆ ಆರೋಪಿ ಜಯಂತ ಮಾಡಿಸಿದ ಕರಾರು ಪತ್ರದ ಪಾಲನೆಯನ್ನು ಉಲ್ಲಂಘಿಸಿ ಸತೀಶ್ ರವರಿಗೆ ಈ ನಿವೇಶನವನ್ನು ನೊಂದಣಿ ಮಾಡಿ ಕೊಡದೇ ಉದ್ದೇಶಪೂರ್ವಕವಾಗಿ ದಿನವನ್ನು ಮುಂದೂಡುತ್ತಾ ತಪ್ಪಿಸಿಕೊಂಡಿರುತ್ತಾನೆ. ಆರೋಪಿಯು ಸತೀಶ್ ರವರ ಹೆಸರಿಗೆ ನಿವೇಶನವನ್ನು ನೊಂದಣಿ ಮಾಡಿಸದೇ ಇರುವುದರಿಂದ ಸತೀಶ್ ರವರಿಂದ ಪಡೆದ ಒಟ್ಟು ರೂ 4,20,000 ರೂ ನ್ನು ವಾಪಾಸ್ಸು ನೀಡುವುದಾಗಿ ಒಪ್ಪಿ 2018ರ ಅ.18 ರಂದು 1,50,000 ರೂ ಹಣವನ್ನು ಹಿಂತಿರುಗಿಸಿರುತ್ತಾನೆ. ಬಾಕಿ ಉಳಿದ 2,70,000 ರೂ ಹಣವನ್ನು 30 ದಿನದ ಒಳಗೆ ಹಿಂತಿರುಗಿಸುವುದಾಗಿ ಸಮಯ ಕೇಳಿದ್ದಾನೆ.
ಆದರೆ 30 ದಿನದ ಒಳಗೆ ಹಣವನ್ನು ನೀಡದೇ ಇದ್ದು, ಪ್ರತಿ ಸಲ ಆರೋಪಿಯ ಹತ್ತಿರ ಬಾಕಿ ಹಣವನ್ನು ಕೇಳಿದಾಗ ಹಣವನ್ನು ನೀಡದೇ ಸತೀಶ್ ರವರಿಗೆ ವಿಶ್ವಾಸ ದ್ರೋಹವನ್ನು ಮಾಡಿರುತ್ತಾನೆ. ಹೀಗಿರುತ್ತಾ ಸತೀಶ್ ವರರು ಆರೋಪಿಗೆ ತಿಳಿಯದಂತೆ ಈ ನಿವೇಶನದ ಮೂಲ ದಾಖಲಾತಿಗಳನ್ನು ಪರಿಶೀಲಿಸಲು ಹೋದಾಗ ಆರೋಪಿಯು ಈಗಾಗಲೇ ಸದ್ರಿ ನಿವೇಶನವನ್ನು 2018ರ ಜೂ.1 ರಂದು ದಿನೇಶ್ ಕೋಠಾರಿ ಎಂಬವರಿಗೆ 12,75,000 ಗಳಿಗೆ ಬ್ರಹ್ಮಾವರ ಉಪನೊಂದಣಿ ಕಛೇರಿಯಲ್ಲಿ ಕ್ರಯಪತ್ರ ಮಾಡಿಸಿರುವುದು ತಿಳಿದು ಬಂದಿರುತ್ತದೆ. ಆರೋಪಿಯು ಸತೀಶ್ ಹಾಗೂ ಅವರ ಹೆಂಡತಿಗೆ ಈ ನಿವೇಶನವನ್ನು ಮಾರಾಟ ಮಾಡುವುದಾಗಿ ನಂಬಿಸಿ ಕರಾರುಪತ್ರ ಮಾಡಿಸಿ ಹಣವನ್ನು ಪಡೆದು ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.