ಡಾ.ಅಂಬೆಡ್ಕರ್ ಕುರಿತು ಅವಹೇಳನಕಾರಿ ಹೇಳಿಕೆ -ಬ್ರಹ್ಮಾವರ ಶಿಕ್ಷಣಾಧಿಕಾರಿ ವಿರುದ್ದ ಡಿಎಸ್ಎಸ್ ದೂರು

ಉಡುಪಿ ಎ.19 (ಉಡುಪಿ ಟೈಮ್ಸ್ ವರದಿ): ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಅಂಬೆಡ್ಕರ್ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ವಿಚಾರವಾಗಿ ದಲಿತ ಸಂಘರ್ಷ ಸಮಿತಿ ವತಿಯಿಂದ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ದಲಿತ ಸಂಘರ್ಷ ಸಮಿತಿ (ಅಂಬೆಡ್ಕರ್ ವಾದ) ಯ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಅವರು, ಬಾಬಾ ಸಾಹೇಬ್ ಅಂಬೆಡ್ಕರ್ ಅವರ ಕುರಿತು ಅವಹೇಳನ ಮಾಡಿರುವ ಕುರಿತು ನನ್ನ ಶಿಕ್ಷಕ ಮಿತ್ರರಾದ ನಾರಾಯಣ್ ಮಣೂರು, ಫಕೀರಪ್ಪ, ಹೆರಿಯ ಮಾಸ್ತರ್ ರವರು ತಮಗೆ ಬಂದ ಸಂದೇಶವನ್ನು ನನಗೆ ಕಳುಹಿಸಿದ್ದು.

ಈ ಸಂದೇಶದ ಪ್ರಕಾರ, ಬ್ರಹ್ಮಾವರ ಕನ್ನಡ ಭಾಷಾ ಶಿಕ್ಷಕರ ವಾಟ್ಸಪ್ ಗ್ರೂಪ್ ಒಂದರಲ್ಲಿ ಬ್ರಹ್ಮಾವರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಒ.ಆರ್.ಪ್ರಕಾಶ್  ಅವರು ಪ್ರೌಡ್ ಟು ಬಿ ಬ್ರಾಹ್ಮಿನ್ ಎಂಬ ತಲೆಬರಹದ ಅಡಿಯಲ್ಲಿ ಬಾಬಾ ಸಾಹೇಬರು ಒಬ್ಬರೇ ಸಂವಿಧಾನವನ್ನು ಬರೆದಿಲ್ಲ. ಬೆನಗಲ್ ನರಸಿಂಗ ರಾವ್‍ರವರು ಸಂವಿಧಾನವನ್ನು ಬರೆದಿದ್ದು, ಎಂಬಿತ್ಯಾದಿ ವಿಷಯಗಳನ್ನು ಲಿಖಿತ ರೂಪದಲ್ಲಿ ಚರ್ಚಿಸುತ್ತಾ, ಅವರ ಕುಟುಂಬದವರ ಸಾಧನೆಯನ್ನು ತಿಳಿಸುತ್ತಾ, ಬ್ರಾಹ್ಮಣರೇ ಶ್ರೇಷ್ಠರು ಎಂದು ಪ್ರತಿಪಾದಿಸಲು ಹೊರಟು, ಡಾ. ಬಾಬಾ ಸಾಹೇಬರವರಿಗೆ ಅಗೌರವವನ್ನು ತೋರಿಸಿರುತ್ತಾರೆ.

ಈ ನಿಟ್ಟಿನಲ್ಲಿ ತಮ್ಮ ವಿಚಾರಗಳನ್ನು ಮಂಡಿಸುತ್ತಾ, ನೂರಾರು ಮಂದಿ ಇರುವ ಬ್ರಹ್ಮಾವರ ಕನ್ನಡ ಭಾಷಾ ಶಿಕ್ಷಕರ ವಾಟ್ಸಾಪ್ ಗ್ರೂಪ್ ನಲ್ಲಿ ಈ ಸಂದೇಶವನ್ನು ಹರಿಯಬಿಟ್ಟು, ಇದನ್ನು ಮತ್ತಷ್ಟು ಶೇರ್ ಮಾಡಿ ಎಂಬುದಾಗಿ ತಿಳಿಸಿರುತ್ತಾರೆ. ತಾನೊಬ್ಬ ಉನ್ನತ ಸ್ಥಾನದಲ್ಲಿರುವ ಸರಕಾರಿ ನೌಕರ ಎನ್ನುವ ಕನಿಷ್ಠ ಪ್ರಜ್ಞೆಯೂ ಇಲ್ಲದೆ, ಇಡೀ ವಿಶ್ವವೇ ಉನ್ನತ ಸ್ಥಾನದಲ್ಲಿಟ್ಟು ಗೌರವಿಸುವಂತಹ ಬಾಬಾ ಸಾಹೇಬರವರ ಕುರಿತು ಅವಹೇಳನ ಮಾಡಿದ್ದಾರೆ. ತನ್ನ ಮನೋವಿಕೃತಿಯನ್ನು ತಮ್ಮ ಬರಹದ ಉದ್ದಕ್ಕೂ ಬ್ರಾಹ್ಮಣರೇ ಶ್ರೇಷ್ಠರೆಂದು ಪ್ರತಿಪಾದಿಸುತ್ತಾ, ಹಾಗೂ ಡಾ. ಬಾಬಾ ಸಾಹೇಬರನ್ನು ಅಗೌರವದಿಂದ ಕಾಣಬೇಕೆಂಬ ದುರುದ್ದೇಶದಿಂದ ಮಾಡಿರುವ ಬರಹವಾಗಿದ್ದು, ಇದರಿಂದ ಇಡೀ ಶಿಕ್ಷಕ ಸಮುದಾಯಕ್ಕೆ ತಪ್ಪು ಸಂದೇಶವನ್ನು ರವಾನೆ ಮಾಡುವ ಹುನ್ನಾರವನ್ನು ಹೊಂದಿರುತ್ತಾರೆ.

ಆದುದರಿಂದ, ಇವರ ವಿರುದ್ಧ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯ್ದೆಯ ಕಲಂ 3(1)(ಯು), 3(1)(ವಿ) ಹಾಗೂ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಪ್ರಥಮ ವರ್ತಮಾನ(ಎಫ್‍ಐಆರ್) ದಾಖಲು ಮಾಡಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದ್ದಾರೆ. ಮುಖಂಡರಾದ ಶ್ಯಾಮರಾಜ್ ಭೀರ್ತಿ, ಪರಮೇಶ್ವರ ಉಪ್ಪುರು, ಶ್ಯಾಮ್ ಸುಂದರ್ ತೆಕಟ್ಟೆ, ಫಕೀರಪ್ಪ, ನಾರಾಯಣ್ ಮಣೂರು, ಭಾಸ್ಕರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!