ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆ ಮದ್ಯ ಖರೀದಿಗೆ ಮುಗಿಬಿದ್ದ ಮದ್ಯಪ್ರಿಯರು!
ನವದೆಹಲಿ ಎ.19: ಇತ್ತ ದೆಹಲಿಯಲ್ಲಿ ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆ ಅತ್ತ ಬಾರ್ ಗಳ ಮುಂದೆ ಮದ್ಯ ಖರೀದಿಗೆ ಜನರು ಸಾಲು ಗಟ್ಟಿ ನಿಂತಿರುವ ದೃಶ್ಯ ಕಂಡು ಬಂದಿದೆ. ಒಂದು ವಾರಗಳ ಕಾಲ ಲಾಕ್ ಡೌನ್ ಇರಲಿದೆ ಎಂಬ ಆದೇಶ ಹೊರ ಬೀಳುತ್ತಿದ್ದಂತೆ, ಮದ್ಯಪ್ರಿಯರು ನಾ ಮುಂದು.. ತಾ ಮುಂದು.. ಎಂದು ಒಂದು ವಾರಕ್ಕೆ ಆಗುವಷ್ಟು ಮದ್ಯವನ್ನು ಕೊಂಡುಕೊಳ್ಳುವ ತವಕದಲ್ಲಿದ್ದರು.
ದೆಹಲಿಯ ಖಾನ್ ಮಾರ್ಕೆಟ್ ನ ಬಾರ್ ವೊಂದರ ಮುಂದೆ ಮದ್ಯ ಖರೀದಿಗೆ ಮುಗಿಬಿದ್ದಿದ್ದ ಜನರಲ್ಲಿ ಯಾವುದೇ ರೀತಿಯಲ್ಲಿ ಮಾರ್ಗಸೂಚಿ ಪಾಲನೆ ಯಾಗಿದ್ದು ಕಂಡು ಬಂದಿಲ್ಲ. ಸಾಮಾಜಿಕ ಅಂತರ ವಿಲ್ಲದೆ ಉದ್ದುದ್ದಕ್ಕೂ ಜನರು ಸಾಲು ಸಾಲಾಗಿ ನಿಂತಿದ್ದ ದೃಶ್ಯ ಕಂಡುಬಂದಿದೆ. ಇನ್ನು ದೆಹಲಿಯ ಹಲವೆಡೆ ಪೊಲೀಸರು ಈಗಾಗಲೆ ಬ್ಯಾರಿಕೇಡ್ಗಳನ್ನು ಹಾಕಿ ಭದ್ರತೆ ಒದಗಿಸಿದ್ದಾರೆ.
ಈ ನಡುವೆ ಶಿವಪುರದಲ್ಲಿ ಮದ್ಯ ಖರೀದಿಸಲು ಬಂದಿದ್ದ ಮಹಿಳೆಯೊಬ್ಬರು ಕೊರೋನಾ ಬಗ್ಗೆ ಪ್ರತಿಕ್ರಿಯಿಸಿ “ಇಂಜೆಕ್ಷನ್ ನಿಂದ ಪ್ರಯೋಜನವಾಗಲ್ಲ. ಆಲ್ಕೋಹಾಲ್ ನಿಂದಲೇ ಪ್ರಯೋಜನವಾಗುತ್ತದೆ. ನನಗೆ ಔಷಧಿಯಿಂದ ಏನು ಪರಿಣಾಮ ಆಗಲ್ಲ. ಒಂದು ಪೆಗ್ ಹಾಕಿದ್ರೆನೇ ಎಫೆಕ್ಟ್ ಅಗೋದು. ನಾನು ಇಲ್ಲಿಯವರೆಗೆ ಆಸ್ಪತ್ರೆಗೆ ಹೋಗಿಲ್ಲ. ಮಂದೆನೂ ಬಚಾವ್ ಆಗುತ್ತೇನೆ” ಎಂದು ಹೇಳಿದ್ದಾರೆ.