ಓಟದ ಸಾಧನೆಯ ಕಿರೀಟ ಹೊತ್ತು ಮೆರೆದ ‘ಬೋಳಂತೂರು ಕಾಟಿ’ ಇನ್ನು ನೆನಪು ಮಾತ್ರ
ಉಡುಪಿ ಎ.19 (ಉಡುಪಿ ಟೈಮ್ಸ್ ವರದಿ): ಕರಾವಳಿಯ ಕಂಬಳದಲ್ಲಿ ದೊಡ್ಡ ಸಾಧನೆಗಳ ಮೂಲಕ ಮೆರೆದ ಕೋಣ `ಬೋಳಂತೂರು ಕಾಟಿ’ ಅಸುನೀಗಿದೆ. 28 ವರ್ಷದ ಕಾಟಿ ಕೆಲವು ವರ್ಷಗಳಿಂದ ವಿಶ್ರಾಂತಿಯಲ್ಲಿದ್ದ ಕಾಟಿ ಅನಾರೋಗ್ಯಕ್ಕೆ ಒಳಗಾಗಿತ್ತು. ವಯೋ ಸಹಜ ಅನಾರೋಗ್ಯದ ಹಿನ್ನೆಲೆ ಕಾಟಿ ಇಂದು ಬೆಳಿಗ್ಗೆ ತನ್ನ ಜೀವಿತದ ಪಯಣ ನಿಲ್ಲಿಸಿದೆ.
ಬಾಲ್ಯದಲ್ಲಿ ಬಾರ್ಕೂರು ದೇವದಾಸ ಗಡಿಯಾರ್ ಅವರ ಪೋಷಣೆಯಲ್ಲಿದ್ದ ಕಾಟಿ, ಕಳೆದ 20 ವರ್ಷಗಳಿಂದ ಬೋಳಂತೂರು ಮನೆಯಲ್ಲಿ ಇದ್ದ, ಆರಂಭದಲ್ಲಿ ನೇಗಿಲು ಕಿರಿಯ ವಿಭಾಗದಲ್ಲಿ ಕಂಬಳ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ಕಾಟಿ, ಶಿರ್ವ ಕಂಬಳದಲ್ಲಿ ಶಿರ್ವ ವಿಶ್ವನಾಥ್ ಪ್ರಭು ಅವರ ಸಾರಥ್ಯದಲ್ಲಿ ಮೊದಲ ಸಲ ಬಹುಮಾನ ಪಡೆದಿದ್ದ. ಮುಂದೆ ಮೂರು ವರ್ಷ ಕಿರಿಯ ನೇಗಿಲು ವಿಭಾಗದಲ್ಲಿ ಕಾಟಿಯನ್ನು ಮೀರಿಸಿ ಓಡಬಲ್ಲ ಯಾವ ಕೋಣಗಳೂ ಇರಲೇ ಇಲ್ಲ. ಆದರೆ ಕಾಟಿಗೆ ಜೋಡಿಯಾಗಿ ಓಡಲು ಅದರ ಸರಿಸಮಾನಕ್ಕೆ ಕೋಣಗಳೇ ಸಿಗುತ್ತಿರಲಿಲ್ಲ. ಹಾಗಾಗಿ ಮೂರು ವರ್ಷದಲ್ಲಿ ನಾಲ್ಕು ಕೋಣಗಳ ಜೋಡಿಯಾಗಿ ಕಾಟಿ ಓಡಿತ್ತು.
ಮುಂದೆ ಸೀನಿಯರ್ ವಿಭಾಗಕ್ಕೆ ಅರ್ಹತೆ ಪಡೆದ ಕಾಟಿಗೆ ಸರಿಯಾದ ಜೋಡಿಯ ಹುಡುಕಾಟದಲ್ಲಿದ್ದಾಗ ಬಾರ್ಕೂರು ಶಾಂತರಾಮ ಶೆಟ್ಟರು ಬಾರ್ಕೂರು ದೇವದಾಸ ಗಡಿಯಾರ್ ರೊಂದಿಗೆ ಕೈಜೋಡಿಸಿದ್ದರು. ಶಾಂತಾರಾಮ ಶೆಟ್ಟರ ‘ಮೋಡ’ ಕೋಣದ ಜೊತೆ ನೇಗಿಲು ಹಿರಿಯ ವಿಭಾಗದಲ್ಲಿ ಕಾಟಿಯ ಓಟ ಆರಂಭಗೊಂಡಿತ್ತು. ಆಗ ಅದರ ವೇಗ ಎಷ್ಟಿತ್ತೆಂದರೆ ಹಿರಿಯ ವಿಭಾಗಕ್ಕೆ ಅರ್ಹತೆ ಪಡೆದ ಮೊದಲ ವರ್ಷವೇ ‘ಚಾಂಪಿಯನ್ ಇಯರ್ ಆಫ್ ದಿ ಪುರಸ್ಕಾರ’ ಪಡೆದುಕೊಂಡಿತು. ವಿಶೇಷ ಅಂದರೆ ಮೂರು ವರ್ಷದ ಹಿಂದೆ ಪುತ್ತೂರು ಕೋಟಿ- ಚೆನ್ನಯ ಕಂಬಳದ 25ನೇ ವರ್ಷಾಚರಣೆ ಸಂದರ್ಭದಲ್ಲಿ ಬೋಳಂತೂರು ಕಾಟಿಗೂ 25 ವರ್ಷ ತುಂಬಿತ್ತು.
ಈ ಹಿನ್ನೆಲೆಯಲ್ಲಿ ಈ ಸಂದರ್ಭದಲ್ಲಿ ಕಾಟಿಗೆ ಅದ್ದೂರಿ ಸನ್ಮಾನ ಮಾಡಲಾಗಿತ್ತು.1998ರಲ್ಲಿ ಬೆಳುವಾಯಿ ಸದಾನಂದ ಶೆಟ್ಟಿಯವರು ಕಾಟಿಯನ್ನು ತಮ್ಮ ಬಳಗಕ್ಕೆ ಸೇರಿಸಿಕೊಂಡರು. ಅವರ ‘ಮಾತಿಬೆಟ್ಟು’ ಎಂಬ ಕೋಣದ ಜೊತೆ ಸೇರಿದ ಕಾಟಿ ಹಗ್ಗ ಹಿರಿಯ ವಿಭಾಗಕ್ಕೆ ಪ್ರವೇಶ ಪಡೆದಿತ್ತು, ಅಲ್ಲೂ ಕಾಟಿಯ ಪರಾಕ್ರಮ ಮುಂದುವರಿದಿತ್ತು. ಬಳಿಕ 2001ರಲ್ಲಿ ಬೋಳಂತೂರು ಗಂಗಾಧರ ರೈ ಅವರು ಕಾಟಿ- ಮಾತಿಬೆಟ್ಟು ಜೋಡಿಯನ್ನು ಖರೀದಿಸಿದರು. ಈದು ಪಡ್ಯಾರು ಅಶೋಕ್ ಜೈನರು ಈ ಕೋಣಗಳನ್ನು ಓಡಿಸುತ್ತಿದ್ದರು. ಬೋಳಂತೂರು ಬಳಗಕ್ಕೆ ಸೇರಿದ ಕಾಟಿ ಮುಂದೆ ಸತತ ಮೂರು ವರ್ಷ ಚಾಂಪಿಯನ್ ಆಫ್ ದಿ ಇಯರ್ ಪ್ರಶಸ್ತಿ ಪಡೆದಿದ್ದ. ಮುಂದೆ 2012 ರವರೆಗೂ ಹಗ್ಗ ಹಿರಿಯ ವಿಭಾಗದಲ್ಲಿ ಪ್ರಶಸ್ತಿ ಬೇಟೆ ಮುಂದುವರಿಸಿದ ಕಾಟಿ, 2015ರಲ್ಲಿ ಕನೆಹಲಗೆ ವಿಭಾಗಕ್ಕೆ ಎಂಟ್ರಿ ಕೊಟ್ಟು ಅಲ್ಲೂ ಪ್ರಶಸ್ತಿ ಪಡೆದಿದ್ದ.