ಕೊರೋನಾ 2ನೇ ಅಲೆ ನಿಯಂತ್ರಿಸಲು ನಾಳೆಯಿಂದಲೇ ಹೊಸ ಕಠಿಣ ನಿಯಮ ಜಾರಿ: ಡಾ.ಕೆ ಸುಧಾಕರ್
ಬೆಂಗಳೂರು ಎ.19: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ 2 ನೇ ಅಲೆಯನ್ನು ನಿಯಂತ್ರಿಸುವ ಸಲುವಾಗಿ ನಾಳೆಯಿಂದಲೇ ಹೊಸ ಕಠಿಣ ನಿಯಮ ಜಾರಿ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಕುರಿತು ಅನೇಕ ಸುದ್ದಿಗಳು ಹರಡುತ್ತಿದೆ. ಆದರೆ ಕೊರೋನಾ ನಿಯಂತ್ರಣಕ್ಕೆ ಲಾಕ್ ಡೌನ್ ಒಂದೇ ಪರಿಹಾರವಲ್ಲ. ಬಿಗಿಯಾದ ಕ್ರಮಗಳು ಆಗಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ವಿಶೇಷವಾಗಿ ಕ್ರಮ ತೆಗೆದುಕೊಳ್ಳಬೇಕಿದೆ. ಆದ್ದರಿಂದ ಕೆಲವು ಚಟುವಟಿಕೆಗಳಿಗೆ ಕಡಿವಾಣ ಹಾಕಲೇಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇನ್ನು ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿ ಇಂದು ಉನ್ನತ ಮಟ್ಟದ ಸಭೆ ನಡೆಯಲಿದ್ದು, ಕೊರೋನಾಗೆ ಚಿಕಿತ್ಸೆ ಪಡೆಯುತ್ತಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಅವರೂ ಕೂಡ ಆಸ್ಪತ್ರೆಯಿಂದಲೇ ವಿಡಿಯೋ ಕಾನ್ಫರನ್ಸ್ ಮೂಲಕ ಭಾಗವಹಿಸುತ್ತಾರೆ. ಆದ್ದರಿಂದ ಇಂದೇ ಬೆಂಗಳೂರಿಗೆ ಸಂಬಂಧಪಟ್ಟ ಕಠಿಣ ನಿಯಮ ಜಾರಿಯಾಗಬಹುದು ಎಂದು ತಿಳಿಸಿದ್ದಾರೆ.