ಚೀನಾಗೆ ಮೊದಲ ಶಾಕ್, 471 ಕೋಟಿ ವೆಚ್ಚದ ರೈಲ್ವೆ ಯೋಜನೆ ರದ್ದು!
ನವದೆಹಲಿ: 20 ಭಾರತೀಯ ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರ ಚೀನಾ ಕಂಪನಿಗೆ ನೀಡಿದ್ದ 471 ಕೋಟಿ ರುಪಾಯಿ ವೆಚ್ಚದ ರೈಲ್ವೆ ಯೋಜನೆಯನ್ನು ರದ್ದುಪಡಿಸಿದೆ.
ಕಾನ್ಪುರ್-ದೀನ್ ದಯಾಳ್ ಉಪಾಧ್ಯಾಯ ವಿಭಾಗದಲ್ಲಿ ಸಿಗ್ನಲಿಂಗ್ ಮತ್ತು ದೂರಸಂಪರ್ಕ ಕಲ್ಪಿಸುವ ಯೋಜನೆಯನ್ನು ಬೀಜಿಂಗ್ ನ್ಯಾಷನಲ್ ರೈಲ್ವೆ ರಿಸರ್ಚ್ ಅಂಡ್ ಡಿಸೈನ್ ಇನ್ಸಿಟ್ಯೂಷನ್ ಆಫ್ ಸಿಗ್ನಲ್ ಅಂಡ್ ಕಮ್ಯೂನಿಕೇಷನ್ ಗ್ರೂಪ್ ಕಂಪನಿಗೆ ಜೂನ್ 2016ರಲ್ಲಿ ಗುತ್ತಿಗೆ ನೀಡಲಾಗಿತ್ತು. ವಿಶ್ವಬ್ಯಾಂಕ್ ನಿಂದ 471 ಕೋಟಿ ರುಪಾಯಿ ಸಾಲ ಪಡೆದು ಗುತ್ತಿಗೆ ನೀಡಲಾಗಿತ್ತು.
ನಾಲ್ಕು ವರ್ಷದಲ್ಲಿ ಕೇವಲ 20ರಷ್ಟು ಕೆಲಸ ಮಾತ್ರ ಪೂರ್ಣಗೊಂಡಿದ್ದು ಕಳಪೆ ಸಾಧನೆ ಎಂಬ ಕಾರಣ ನೀಡಿ ಒಪ್ಪಂದವನ್ನು ಕೇಂದ್ರ ರೈಲ್ವೆ ಸಚಿವಾಲಯ ರದ್ದು ಮಾಡಿದೆ.
ಡೆಡಿಕೇಟೆಡ್ ಫ್ರೀಟ್ ಕಾರಿಡಾರ್ ಕಾರ್ಪೋರೇಶನ್ ಇಂಡಿಯಾ(ಡಿಎಫ್ಸಿಸಿಐಎಲ್) ಸಂಸ್ಥೆಯು ಬೀಜಿಂಗ್ ನ್ಯಾಷನಲ್ ರೈಲ್ವೆ ರೀಸರ್ಚ್ ಅಂಡ್ ಡಿಸೈನ್ (ಬಿಎನ್ಆರ್ಆರ್ಡಿಡಿಐ) ಸಂಸ್ಥೆ ಜೊತೆಗಿನ ಒಪ್ಪಂದವನ್ನು ರದ್ದು ಮಾಡಿದೆ.