ಹಾವು ರಕ್ಷಿಸಲು ಹೋದ ಸ್ನೇಕ್ ಮುಸ್ತಾಗೆ ಹಾವು ಕಚ್ಚಿ ಸಾವು
ಉಪ್ಪಿನಂಗಡಿ: ಹಾವುಗಳನ್ನು ಹಿಡಿದು ಅರಣ್ಯಕ್ಕೆ ಬಿಡುವ ಹವ್ಯಾಸ ಹೊಂದಿರುವ ಸ್ನೇಕ್ ಮುಸ್ತಾ ಎಂದೇ ಹೆಸರು ಗಳಿಸಿರುವ ಯುವಕನಿಗೆ ಹಾವನ್ನು ಹಿಡಿಯುವ ಹವ್ಯಾಸವೇ ಪ್ರಾಣಕ್ಕೆ ಎರವಾದ ಘಟನೆ ಬೆಳ್ತಂಗಡಿ ತಾಲೂಕಿನ ನೇಜಿಕಾರ್ ಎಂಬಲ್ಲಿ ಶನಿವಾರ ನಡೆದಿದೆ.
ಪುತ್ತೂರು ತಾಲೂಕಿನ ಉಪ್ಪಿನಂಗಡಿಯ 34 ನೆಕ್ಕಿಲಾಡಿ ಗ್ರಾಮದ ಬೊಳಂತಿಲ ಹೊಸ ಕಾಲೊನಿ ನಿವಾಸಿ ಎಂ. ಆರ್. ಮುಸ್ತಫಾ ಆಲಿಯಾಸ್ ಸ್ನೇಕ್ ಮುಸ್ತಾ ಹಾವು ಕಚ್ಚಿ ಸಾವನ್ನಪ್ಪಿದ ಯುವಕ.ಆಟೋ ಚಾಲಕರಾಗಿರುವ ಈ ಯುವಕ, ಹಲವು ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟಿದ್ದರು. ಶನಿವಾರ ನೇಜಿಕಾರಿನ ಮನೆಯೊಂದರ ಕೋಳಿ ಗೂಡಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ನಾಗರಹಾವನ್ನು ರಕ್ಷಿಸಲು ಹೋದ ಸ್ನೇಕ್ ಮುಸ್ತಾ ಅವರಿಗೆ ಹಾವು ಎರಡು ಕೈಗಳಿಗೆ ಕಚ್ಚಿದ್ದು ತೀವ್ರ ಅಸ್ವಸ್ಥಗೊಂಡ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯುವಷ್ಟರಲ್ಲಿ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.ಮಹಮ್ಮದ್ ಮುಸ್ತಾಫಾ ಪ್ರಾಣಿ ಪ್ರಿಯರಾಗಿದ್ದು, ಪಾರಿವಾಳ, ಆಡು, ಕೋಳಿ ಸಾಕುತ್ತಿದ್ದರು. ವಿಷದ ಹಾವುಗಳನ್ನು ಬರಿಗೈಯ್ಯಲ್ಲೆ ಹಿಡಿದು ಕಾಡಿಗೆ ಬಿಡುತ್ತಿದ್ದರು. ಸಾವಿರಕ್ಕೂ ಅಧಿಕ ಹಾವುಗಳನ್ನು ಅವರು ರಕ್ಷಿಸಿದ್ದು ಹಲವಾರು ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಸನ್ಮಾನಿಸಿದೆ.