ಅಪಪ್ರಚಾರವೇ ಕಾಂಗ್ರೆಸ್ ಜೀವಾಳ: ಕುಯಿಲಾಡಿ ಸುರೇಶ್ ನಾಯಕ್
ಉಡುಪಿ: ಕೇಂದ್ರ ಸರಕಾರದ ಆಹಾರ ಭದ್ರತಾ ಕಾಯ್ದೆಯನ್ವಯ ರಾಜ್ಯದಲ್ಲಿ ಜಾರಿಯಲ್ಲಿರುವ ಅನ್ನ ಭಾಗ್ಯ ಯೋಜನೆಯನ್ನು ಕಾಂಗ್ರೆಸ್ ತನ್ನದೇ ಸಾಧನೆ ಎಂಬಂತೆ ಬಿಂಬಿಸುತ್ತಿರುವುದು ವಿಷಾದನೀಯ. ಪ್ರತೀ ಕೆ.ಜಿ. ಅಕ್ಕಿಗೆ ರೂ.29 ರಂತೆ ಕೇಂದ್ರ ಸರಕಾರ ಭರಿಸುತ್ತಿದ್ದರೂ, ರಾಜ್ಯದ ಪಾಲು ಕೇವಲ 3 ರೂ. ಭರಿಸಿ ಅನ್ನ ಭಾಗ್ಯ ಯೋಜನೆ ತನ್ನದೇ ಸಾಧನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಂಡಿರುವುದು ನಾಚಿಕೆಗೇಡಿನ ವಿಚಾರವಾಗಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ತಿಳಿಸಿದೆ
ಅನ್ನ ಭಾಗ್ಯ ಯೋಜನೆಯನ್ನು ರಾಜ್ಯ ಸರಕಾರ ರದ್ದುಮಾಡುವ ಪಿತೂರಿ ಇದೆ ಎಂಬ ಜಿಲ್ಲಾ ಕಾಂಗ್ರೆಸ್ ನ ಆರೋಪದ ಬಗ್ಗೆ ಜಿಲ್ಲಾ ಬಿಜೆಪಿ ತಿರುಗೇಟು ನೀಡಿದೆ.
ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ರಾಜ್ಯದಲ್ಲಿ ಜಾರಿಗೆ ಬಂದಿದ್ದ ಇಂದಿರಾ ಕ್ಯಾಂಟೀನ್ ಯೋಜನೆಯು ಕೊಟ್ಯಾಂತರ ರೂಪಾಯಿ ವೆಚ್ಚದಲ್ಲಿ ಹೆಸರಿಗೆ ಮಾತ್ರ ಕಡಿಮೆ ದರದ ಆಹಾರ ವ್ಯವಸ್ಥೆ ಎಂಬಂತಿದ್ದು, ಅಸಮರ್ಪಕ ನಿರ್ವಹಣೆಯಿಂದ ಈ ಯೋಜನೆಯಲ್ಲಿ ಲಕ್ಷಾಂತರ ರೂಪಾಯಿ ಹಗರಣ ನಡೆದಿರುವುದನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಮರೆತಂತಿದೆ.
ರಾಜ್ಯಾದ್ಯಂತ ಕೊರೋನಾ ಸಂಕಷ್ಟವನ್ನು ಸಮರ್ಥವಾಗಿ ನಿಭಾಯಿಸುವ ಜೊತೆಗೆ ಅನ್ನ ಭಾಗ್ಯ, ಬಿಸಿಯೂಟದಂತಹ ಯೋಜನೆಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಗತ್ಯ ಮಾರ್ಪಾಡುಗಳೊಂದಿಗೆ ಯಥಾವತ್ತಾಗಿ ಮುಂದುವರಿಸಿಕೊಂಡು ಬಂದಿರುವುದು ಶ್ಲಾಘನೀಯ. ಆದರೆ ಕಾಂಗ್ರೆಸ್ ಮಾತ್ರ ಕೊರೋನಾ ನಿರ್ವಹಣೆಯ ವಿಚಾರದಲ್ಲೂ ರಾಜಕೀಯ ದೃಷ್ಟಿಕೋನದ ಅಪಸ್ವರ ಎತ್ತುತ್ತಿರುವುದು ಖಂಡನೀಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ವಲಸಿಗರಿಗೆ ಆಹಾರ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಒನ್ ನೇಶನ್ ಒನ್ ರೇಶನ್ ಕಾರ್ಡ್ ಆಪ್ ಮೂಲಕ ವಲಸಿಗರು, ಕಾರ್ಮಿಕರು ದೇಶದ ಯಾವುದೇ ಭಾಗದಲ್ಲೂ ಸುಲಭವಾಗಿ ಪಡಿತರ ಆಹಾರ ಧಾನ್ಯ ಪಡೆಯಲು ಸದವಕಾಶಗಳಾಗಿವೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರಕಾರದ ರೂ.6,000 ಜೊತೆಗೆ ರಾಜ್ಯ ಸರಕಾರದ ವತಿಯಿಂದ ರೂ.4,000 ಫಲಾನುಭವಿಗಳ ಖಾತೆಗೆ ಜಮಾ, ಜನಧನ್ ಖಾತೆಗಳಿಗೆ ರೂ.500 ರಂತೆ ಜಮಾ, ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಉಚಿತ ಆಹಾರ ಧಾನ್ಯ ವಿತರಣೆ ಇವೇ ಮುಂತಾದ ಹಲವಾರು ಸೌಲಭ್ಯಗಳು ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನಪರ ಕಾಳಜಿಗೆ ಜ್ವಲಂತ ಸಾಕ್ಷಿಯಾಗಿದೆ.
ಇವೆಲ್ಲದರ ನಡುವೆ ಸರಕಾರದ ಎಲ್ಲಾ ನಡೆಗಳನ್ನು ಕೇವಲ ವಿರೋಧಕ್ಕಾಗಿಯೇ ವಿರೋಧಿಸುವುದು ಕಾಂಗ್ರೆಸ್ ನ ಹಳೇ ಚಾಳಿಯಾಗಿದ್ದು, ನಿರಂತರ ಅಪಪ್ರಚಾರವೇ ಕಾಂಗ್ರೆಸ್ ನ ಸಾಧನೆಯಾಗಿದೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.