ನಿಗದಿಗಿಂತ ಹೆಚ್ಚು ಜನ ಸೇರಿದರೆ ಹಾಲ್’ಗೆ ಬೀಗಮುದ್ರೆ,ಜಾತ್ರೆ ನಡೆದರೆ ಡಿಸಿ,ಎಸ್ಪಿ ವಿರುದ್ಧ ಕಠಿಣ ಕ್ರಮ: ಆರ್.ಅಶೋಕ್
ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೋನಾ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಈ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ತರಲು ರಾಜ್ಯ ಸರ್ಕಾರ ಮತ್ತಷ್ಟು ಕಠಿಣ ಕ್ರಮ ಜಾರಿಗೊಳಿಸಿದೆ. ರಾಜ್ಯದಲ್ಲಿ ಇನ್ನು ಮುಂದೆ ಮದುವೆ ಸೇರಿದಂತೆ ಇತರೆ ಸಮಾರಂಭಗಳಿಗೆ ಸರ್ಕಾರದಿಂದ ಅನುಮತಿ ಪಡೆಯುವುದು ಕಡ್ಡಾಯ ಮಾಡಲಾಗಿದೆ.
ಜಾತ್ರೆಗಳಿಗೂ ಸರ್ಕಾರ ಪೂರ್ಣ ಪ್ರಮಾಣದ ಬ್ರೇಕ್ ಹಾಕಿದೆ. ಒಂದು ವೇಳೆ ಜಾತ್ರೆಗಳು ನಡೆದರೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ.
ವಿಕಾಸಸೌಧದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಮತ್ತು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕಂದಾಯ ಸಚಿವ ಆರ್.ಅಶೋಕ್ ಎಲ್ಲಾ ಜಿಲ್ಲಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ಆನ್’ಲೈನ್ ಸಭೆ ನಡೆಸಿದರು. ಈ ವೇಳೆ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಕಂದಾಯ ಸಚಿವ ಅಶೋಕ್ ಅವರು ಮಾತನಾಡಿ, ಇನ್ನು ಮುಂದೆ ನಿಗದಿಯಾಗುವ ಮದುವೆ ಮತ್ತಿತರ ಸಮಾರಂಭಗಳಿಗೆ ನಿಗದಿತ ಸಂಖ್ಯೆಯ ಜನರಷ್ಟೇ ಪಾಲ್ಗೊಳ್ಳುವಂತೆ ಜಿಲ್ಲಾಡಳಿತದಿಂದ ಪಾಸ್ ಪಡೆಯುವುದು ಕಡ್ಡಾಯ. ಸಮಾರಂಭ ಆಯೋಜಕರು ಜಿಲ್ಲಾಡಳಿತ ಅಥವಾ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಪೊಲೀಸರು ಪಾಸ್ ವಿತರಣೆ ಮಾಡಲಿದ್ದಾರೆಂದು ಮಾಹಿತಿ ನೀಡಿದರು.
ಒಳಾಂಗಣದಲ್ಲಿ 100 ಜನರಿಗೆ ಅವಕಾಶ ಇದ್ದು, ಹೊರಾಂಗಣದಲ್ಲಿ 200 ಮಂದಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಈಗಾಗಲೇ ಬುಕ್ ಆಗಿರುವ ಮದುವೆಗಳಿಗೆ ಪಾಸ್ ನಿಯಮ ಅನ್ವಯ ಇಲ್ಲ. ಪರಿಶೀಲನೆ ವೇಳೆ ನಿಗದಿಗೊಳಿಸಿದ ಸಂಖ್ಯೆಗಿಂತ ಹೆಚ್ಚು ಜನ ಸೇರಿದರೆ ಕಲ್ಯಾಣ ಮಂಟಪಕ್ಕೆ ಬೀಗಮುದ್ರೆಗೆ ಹಾಕಲಾಗುವುದು ಎಂದು ತಿಳಿಸಿದ್ದಾರೆ.
ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ರಾಜ್ಯದಲ್ಲಿ ಯಾವುದೇ ಜಾತ್ರೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಜಾತ್ರೆಗಳು ನಡೆದರೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳೇ ಜವಾಬ್ದಾರರಾಗಿರುತ್ತಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಜಾತ್ರೆಗಳಿಗೆ ಅವಕಾಶವಿಲ್ಲ. ಒಂದು ವೇಳೆ ಜಾತ್ರೆಗಳಿಗೆ ಅವಕಾಶ ನೀಡಿದರೆ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳನ್ನು ಅಮಾನತುಗೊಳಿಸಬೇಕಾಗುತ್ತೆದ ಎಂದು ಎಚ್ಚರಿಕೆ ನೀಡಿದರು.