ಪ್ರಾದೇಶಿಕ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿದ ಪ್ರಸಾರ ಭಾರತಿಯ ಕ್ರಮಕ್ಕೆ ಟಿ.ಎಸ್.ನಾಗಾಭರಣ ವಿರೋಧ

ಬೆಂಗಳೂರು: ಆಕಾಶವಾಣಿಯ ಪ್ರಾದೇಶಿಕ ಕೇಂದ್ರಗಳ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿದ ಪ್ರಸಾರ ಭಾರತಿಯ ಕ್ರಮಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಆಕಾಶವಾಣಿಯ ಕಾರ್ಯವೈಖರಿಯಲ್ಲಿ ಬದಲಾವಣೆ ತಂದು ಸ್ಥಳೀಯ ವಿಚಾರ, ಸಂಸ್ಕೃತಿ, ಕಲೆಗೆ ಉಪಯುಕ್ತವಾಗಿದ್ದ ತುಳು ಸೇರಿದಂತೆ ಇತರೆ ಪ್ರಾದೇಶಿಕ ಭಾಷೆಯ ಕಾರ್ಯಕ್ರಮಗಳನ್ನು ಕಡಿತಗೊಳಿಸಿತ್ತು. ಈ ಸಂಬಂಧ ಆಕಾಶವಾಣಿ ನಿಲಯ ನಿರ್ದೇಶಕರಿಗೆ ಪತ್ರ ಬರೆದಿರುವ ಪ್ರಾಧಿಕಾರದ ಅಧ್ಯಕ್ಷರು, ದಕ್ಷಿಣದ ಕೇರಳ, ತಮಿಳುನಾಡು, ಆಂಧ್ರಪ್ರದೇಶಕ್ಕೆ ಇಲ್ಲದ ನಿಯಮಗಳನ್ನು ಕರ್ನಾಟಕದ ಮೇಲೆ ಹೇರಿ ಏಪ್ರಿಲ್ 13ರಿಂದ ಹೊಸ ನೀತಿಯನ್ನು ಜಾರಿಮಾಡಿರುವುದು ನಿಯಮಬಾಹಿರವಾಗಿದ್ದು, ಕೂಡಲೇ ಈ ನೀತಿಯನ್ನು ಪರಿಷ್ಕರಿಸಿ ಈ ಮೊದಲಿನಂತೆ ಆಕಾಶವಾಣಿಯಲ್ಲಿ ಹೆಚ್ಚಿನ ಸಮಯವನ್ನು ಕನ್ನಡದ ಕಾರ್ಯಕ್ರಮಗಳು ಪ್ರಸಾರವಾಗುವಂತೆ ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದಾರೆ.
 
ಇದಕ್ಕೆ ಪತ್ರಿಕಾಪ್ರಕಟಣೆ ಮೂಲಕ ವಿರೋಧ ವ್ಯಕ್ತಪಡಿಸಿರುವ ನಾಗಾಭರಣ, ಪ್ರಸಾರ ಭಾರತಿ ಪ್ರಾದೇಶಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆ ಕ್ರಮವಹಿಸುವುದು ಬಹಳ ಮುಖ್ಯವಾದ ಅಂಶವಾಗಿದೆ. ನಾಡುನುಡಿಯ ಬಗ್ಗೆ ಆಕಾಶವಾಣಿಯ ಕೊಡುಗೆ ಬಹುಮುಖ್ಯವಾಗಿದ್ದು, ಕೇವಲ ನಿರ್ವಹಣಾ ವೆಚ್ಚದ ಕಾರಣ ನೀಡಿ ಪ್ರಾದೇಶಿಕತೆಯ ಆಸ್ಮಿತೆಗೆ ಧಕ್ಕೆ ಉಂಟುಮಾಡುವ ಕ್ರಮ ಖಂಡನೀಯ. ಹಾಗಾಗಿ ಪ್ರಸಾರ ಭಾರತಿ ಹೊಸ ನಿಯಮವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. 

ಪ್ರಸಾರ ಭಾರತಿ ಜಾರಿಗೆ ತಂದಿರುವ ಹೊಸನೀತಿ, ನಿಯಮಗಳಿಂದಾಗಿ ಇದುವರೆವಿಗೂ ನಿರಂತರವಾಗಿ ಬಿತ್ತರವಾಗುತ್ತಿದ್ದ ಪ್ರಾದೇಶಿಕ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸುವುದು ಸರಿಯಾದ ಕ್ರಮವಲ್ಲ. ಇದರಿಂದಾಗಿ ಸ್ಥಳೀಯ ಕಲಾವಿದರಿಗೆ, ಜಿಲ್ಲಾ ಕಚೇರಿಗಳಲ್ಲಿ ಕೆಲಸ ನಿರ್ವಹಿಸುವ ಸ್ಥಳೀಯ ಉದ್ಯೋಗಿಗಳ ಬದುಕು ಡೋಲಾಯಮಾನವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಾದೇಶಿಕತೆಯ ಅಸ್ಮಿತೆಯನ್ನು ಪ್ರಶ್ನಿಸಿದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!