ಕಾರ್ಕಳದಲ್ಲಿ ಮತ್ತೆ ಮುಂದುವರಿದ ದನ ಕಳ್ಳತನ ಪ್ರಕರಣ
ಕಾರ್ಕಳ ಎ.17: ಕೊಟ್ಟಿಗೆಯಲ್ಲಿ ಕಟ್ಟಿದ್ದ ದನವನ್ನು ಕಳ್ಳತನ ಮಾಡಿರುವ ಘಟನೆ ಎ.12 ರಂದು ಕಾರ್ಕಳದ ಕುಂಟಲ್ಪಾಡಿಯಲ್ಲಿ ನಡೆದಿದೆ. ಸುನೀಲ್ ಕೊಟ್ಯಾನ್ ಎಂಬವರ ಮನೆಯ ದನಗಳ ಕಳ್ಳತನ ನಡೆದಿದೆ. ಇವರು ಕೃಷಿಕರಾಗಿದ್ದು ಜೀವನ ನಿರ್ವಹಣೆಗಾಗಿ 6 ದನಗಳನ್ನು ಸಾಕಿಕೊಂಡಿದ್ದರು. ಎ.12 ರಂದು ರಾತ್ರಿ ದನಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದರು.
ಮರುದಿನ ಬೆಳಿಗ್ಗೆ ಹಾಲು ಕರೆಯಲು ಹೋದಾಗ ಕಟ್ಟಿ ಹಾಕಿದ ದನಗಳ ಪೈಕಿ 5 ದನಗಳು ಮಾತ್ರ ಇದ್ದು 1 ದನ ಕಳವಾಗಿರುವುದು ತಿಳಿದು ಬಂದಿದೆ.
ಈ ನಡುವೆ ಎ.16 ರಂದು ತಮ್ಮ ಮೊಬೈಲ್ ಗೆ ಬಂದ ಸಿಸಿ ಟಿವಿ ಫೂಟೇಜ್ ನಲ್ಲಿ ಮೂವರು ವ್ಯಕ್ತಿಗಳು ಕಾಬೆಟ್ಟುವಿನ ಬಾರ್ ಬಳಿ ಕಪ್ಪು ಬಣ್ಣದ ದನವನ್ನು ಸೇರಿ ಇತರೇ 2 ದನವನ್ನು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಹಿಂಸಾತ್ಮಕವಾಗಿ ಕಾರಿಗೆ ತುಂಬಿಸುತ್ತಿದ್ದುದು ಕಂಡು ಬಂದಿದೆ. ಸುನೀಲ್ ಕೊಟ್ಯಾನ್ ಅವರ ಕಳುವಾದ ದನದ ಮೌಲ್ಯ 20,000 ರೂ ಆಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.