ಬಸವಕಲ್ಯಾಣ: ಮತದಾರರಿಗೆ ಹಣ ಹಂಚಲು ಬಂದವನಿಗೆ ಗ್ರಾಮಸ್ಥರಿಂದ ಚಪ್ಪಲಿ ಏಟು!

ಬೀದರ್ ಜಿಲ್ಲೆ: ತಾಲ್ಲೂಕಿನ ತ್ರಿಪುರಾಂತ ಗ್ರಾಮದಲ್ಲಿ ಶುಕ್ರವಾರ ವ್ಯಕ್ತಿಯೊಬ್ಬ ಮತದಾರರಿಗೆ ಹಣ ಹಂಚಲು ಬಂದಾಗ ಗ್ರಾಮಸ್ಥರು ಚಪ್ಪಲಿಯಿಂದ ಹೊಡೆದಿದ್ದಾರೆ. ರಾಜಕೀಯ ಪಕ್ಷಗಳೇ ಮತದಾರರನ್ನು ಭ್ರಷ್ಟರನ್ನಾಗಿ ಮಾಡುತ್ತಿವೆ. ನಮ್ಮಲ್ಲಿ ಹಣ ಇಲ್ಲವೆ? ನಿಮ್ಮ ಹಣ ನಮಗೆ ಏಕೆ ಕೊಡುತ್ತಿದ್ದೀರಿ ಎನ್ನುತ್ತ ವ್ಯಕ್ತಿಯ ಕೈಯಲ್ಲಿದ್ದ ನೋಟುಗಳನ್ನು ಕಿತ್ತುಕೊಂಡ ಗ್ರಾಮಸ್ಥರು ಅವುಗಳನ್ನು ಗಾಳಿಯಲ್ಲಿ ತೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚುನಾವಣಾ ವೀಕ್ಷಕರಿಗೆ ಕರೆ ಮಾಡಿ ಮಾಹಿತಿ ನೀಡಿದ ನಂತರ ಫ್ಲೈಯಿಂಗ್‌ ಸ್ಕ್ವಾಡ್‌, ಪೊಲೀಸರು ಸ್ಥಳಕ್ಕೆ ಬಂದು ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡರು. ಹಣ ಹಂಚಿಕೆ ಹಾಗೂ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ದೃಶ್ಯವನ್ನು ಕೆಲವರು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ವಿಡಿಯೊ ವೈರಲ್‌ ಆಗಿದೆ.

ಹಣ ಹಂಚಿಕೆ ವಿಡಿಯೊ ವೈರಲ್‌ ಆಗುತ್ತಿದ್ದಂತೆಯೇ ಪ್ರಮುಖ ರಾಜಕೀಯ ಪಕ್ಷಗಳು ಪರಸ್ಪರ ಆರೋಪ ಮಾಡಿವೆ.

ಬಿಜೆಪಿ ಅಭ್ಯರ್ಥಿ ಶರಣು ಸಲಗರ ಸ್ಥಳಕ್ಕೆ ಬಂದಾಗ ಅಲ್ಲಿದ್ದ ಪೊಲೀಸ್‌ ಅಧಿಕಾರಿ, ನೀವು ಮಧ್ಯ ಪ್ರವೇಶಿಸಬೇಡಿ ಎನ್ನುತ್ತಾರೆ. ‘ನಾನು ಬಿಜೆಪಿ ಅಭ್ಯರ್ಥಿ ಇದ್ದೇನೆ. ಅವರ ಪರವಾಗಿ ಬಂದಿಲ್ಲ. ಹಣ ಹಂಚಿದ್ದರೆ ದೂರು ಕೊಡಿ, ಅವರನ್ನು ಹೊಡೆಯಬೇಡಿ’ ಎಂದು ಶರಣು ಹೇಳಿರುವುದು ವಿಡಿಯೊದಲ್ಲಿದೆ.

‘ಫ್ಲೈಯಿಂಗ್‌ ಸ್ಕ್ವಾಡ್‌ ಗ್ರಾಮಕ್ಕೆ ತೆರಳಿ ಮಾಹಿತಿ ಪಡೆದಿದೆ. ಯಾವ ಪಕ್ಷದವರು ಹಣ ಹಂಚುತ್ತಿದ್ದರು ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ದೊರಕಿಲ್ಲ. ವಿಚಾರಣೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!