ಹಾಸನ: ರೇವ್ ಪಾರ್ಟಿ ಆಯೋಜಿಸಿದ ಮಂಗಳೂರಿನ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಬಂಧನ, ಪುತ್ರ ಎಸ್ಕೇಪ್!

ಮಂಗಳೂರು, ಎ.16 : ಹಾಸನದಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿ ಮಹತ್ತರವಾದ ಮಾಹಿತಿಯೊಂದು ಹೊರ ಬಿದ್ದಿದೆ. ಈ ರೇವ್ ಪಾರ್ಟಿಯನ್ನು ಮಂಗಳೂರಿನ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ಒಬ್ಬರು ತಮ್ಮ ಪುತ್ರನ ಜೊತೆ ಸೇರಿ ಆಯೋಜನೆ ಮಾಡಿದ್ದಾರೆ ಎಂಬ ಸುದ್ದಿ ವರದಿಯಾಗಿದೆ.  

ಈ ಪಾರ್ಟಿಗೆ ಪೊಲೀಸರು ದಿಢೀರ್ ಆಗಿ ರೈಡ್ ಮಾಡಿ, ಪಾರ್ಟಿಯ ಅಮಲಿನಲ್ಲಿದ್ದ 131 ಮಂದಿಯನ್ನು ವಶಕ್ಕೆ ಪಡೆದಿದ್ದರು. ಈ ಪೈಕಿ ಮಂಗಳೂರಿನ ಪಾಂಡೇಶ್ವರದ ನಾರ್ಕೋಟಿಕ್ ಅಂಡ್ ಇಕನಾಮಿಕ್ ಕ್ರೈಮ್ ಠಾಣೆಯ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಶ್ರೀಲತಾ ಕೂಡ ಒಬ್ಬರಾಗಿದ್ದರು.

ಮಂಗಳೂರಿನ ಪಾಂಡೇಶ್ವರದ ನಾರ್ಕೋಟಿಕ್ ಠಾಣೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿರುವ ಶ್ರೀಲತಾ ಮೂಲತಃ ಕೇರಳದವರು. ಕರ್ನಾಟಕದಲ್ಲಿ ಪೊಲೀಸ್ ಆಗಿ ಈ ಹಿಂದೆ ಪಣಂಬೂರು, ಸುರತ್ಕಲ್, ಬಜ್ಪೆಯಲ್ಲಿ ಕೆಲಸ ಮಾಡಿದ್ದ ಶ್ರೀಲತಾ ಕಳೆದ ನಾಲ್ಕು ವರ್ಷಗಳಿಂದ ನಾರ್ಕೋಟಿಕ್ ಠಾಣೆಯಲ್ಲಿದ್ದರು. ಈ ನಡುವೆ, ಮಂಗಳೂರಿನ ಕೆಲವು ಯುವಕರ ಜೊತೆ ನಂಟು ಬೆಳೆಸಿಕೊಂಡಿದ್ದ ಈಕೆಯೇ ಇದೀಗ ಹಾಸನದಲ್ಲಿ ಪೊಲೀಸರ ಕಣ್ಣು ತಪ್ಪಿಸಿ ರೇವ್ ಪಾರ್ಟಿ ಆಯೋಜನೆ ಮಾಡಿದ ಆರೋಪದಲ್ಲಿ ಸಿಕ್ಕಿಬಿದ್ದಿದ್ದಾರೆ. ನಾರ್ಕೋಟಿಕ್ ಠಾಣೆಯಲ್ಲಿದ್ದು ಡ್ರಗ್ ಪೆಡ್ಲರ್ ಗಳನ್ನು ಹಿಡಿಯಬೇಕಾಗಿದ್ದ ಪೊಲೀಸ್ ಪೇದೆ ತಾನೇ ಡ್ರಗ್ ಪಾರ್ಟಿಯಲ್ಲಿ ಸಿಕ್ಕಿಬಿದ್ದು ಈಗ ಅಮಾನತ್ತಿನ ತೂಗುಗತ್ತಿ ಎದುರಿಸುತ್ತಿದ್ದಾರೆ.

ಜೊತೆಗೆ ಬೆಂಗಳೂರಿನ ಕಂಪನಿ ಒಂದರಲ್ಲಿ ಕೆಲಸಕ್ಕಿದ್ದಾನೆ ಎನ್ನಲಾಗುತ್ತಿರುವ ಲೇಡಿ ಪೊಲೀಸ್ ಮಗ ಅತುಲ್, ಡ್ರಗ್ ಪೆಡ್ಲರ್ ಗಳ ಜೊತೆ ನಿಕಟ ನಂಟು ಇರಿಸಿಕೊಂಡಿದ್ದು ಸ್ವತಃ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ಅನ್ನೋ ಅನುಮಾನ ಇದೆ. ಸುರತ್ಕಲ್ ಬಳಿಯ ಕಾಟಿಪಳ್ಳದ ಕೃಷ್ಣಾಪುರದಲ್ಲಿ ತಾಯಿ ಜೊತೆ ಮನೆ ಮಾಡಿಕೊಂಡಿದ್ದ ಅತುಲ್, ಬೆಂಗಳೂರು ಮತ್ತು ಮಂಗಳೂರಿನಲ್ಲಿ ಡ್ರಗ್ ಪ್ರಿಯರ ಗೆಳೆತನ ಸಾಧಿಸಿದ್ದ. ಇದೇ ಕಾರಣದಿಂದ ಬೆಂಗಳೂರಿನ ಹುಡುಗರ ಜೊತೆ ಸೇರಿ ಸಕಲೇಶಪುರದ ನಿಗೂಢ ಜಾಗದಲ್ಲಿ ರೇವ್ ಪಾರ್ಟಿ ಆಯೋಜಿಸಲು ಪ್ಲಾನ್ ಹಾಕಿದ್ದ. ಮೊನ್ನೆ ಪೊಲೀಸರು ದಾಳಿ ಮಾಡಿದ್ದು ಗೊತ್ತಾದ ಕೂಡಲೇ ಅತುಲ್ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಇದೀಗ ಈತನ ಪತ್ತೆಗೆ ಹಾಸನ ಪೊಲೀಸರು ಶೋಧ ಆರಂಭಿಸಿದ್ದಾರೆ.  

ಪ್ರಕರಣಕ್ಕೆ ಸಂಬಂಧಿಸಿ ಎಸ್ಟೇಟ್ ಮಾಲೀಕ ಎನ್ನಲಾಗಿದ್ದ ಗಗನ್ ಮತ್ತು ಪಾರ್ಟಿ ಆಯೋಜಿಸಿದ್ದಾರೆ ಎನ್ನಲಾದ ಬೆಂಗಳೂರಿನ ಸೋನಿ, ಪಂಕಜ್, ನಾಸಿರ್ ಎಂಬ ಮೂವರನ್ನು ಬಂಧಿಸಲಾಗಿತ್ತು. ಈ ಮೂವರ ವಿಚಾರಣೆ ವೇಳೆ ಮಂಗಳೂರಿನ ಲೇಡಿ ಪೊಲೀಸ್ ಮತ್ತು ಮತ್ತಾಕೆಯ ಪುತ್ರನ ಹೆಸರು ಹೊರಬಿದ್ದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿ  ಪಾರ್ಟಿ ಕಿಂಗ್ ಪಿನ್ ಎನ್ನಲಾಗುತ್ತಿರುವ ಮಂಗಳೂರಿನ ಲೇಡಿ ಪೊಲೀಸ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಲೇಡಿ ಪೊಲೀಸ್ ಅರೆಸ್ಟ್ ಆಗಿರುವ ಬಗ್ಗೆ ಹಾಸನ ಎಸ್ಪಿ ಕಚೇರಿಯಿಂದ ಮಂಗಳೂರು ಪೊಲೀಸ್ ಕಮಿಷನರಿಗೆ ವರದಿ ಬರಲಿದ್ದು, ಎಫ್ ಐಆರ್ ನಲ್ಲಿ ಹೆಸರು ದಾಖಲಾಗಿದ್ದರೆ ಮಂಗಳೂರಿನ ನಾರ್ಕೋಟಿಕ್ ಠಾಣೆಯಿಂದ ಪೊಲೀಸ್ ಸಸ್ಪೆಂಡ್ ಆಗುವುದು ಖಚಿತವಾಗಿದೆ.

ಇನ್ನು ಆಲೂರು ಬಳಿಯ ಹೊಂಗರವಳ್ಳಿಯ ಎಸ್ಟೇಟ್ ಒಂದರಲ್ಲಿ ಪಾರ್ಟಿ ಆಯೋಜನೆಯಾಗಿದ್ದು ಕಾಟೇಜ್ ಗಳನ್ನು ಮಾಡಿಕೊಂಡು ಓಪನ್ ಹಾಲ್ ಅರೇಂಜ್ ಮಾಡಿಸಿ, ಡ್ರಗ್ಸ್ ಮತ್ತೇರಿಸಲು ವ್ಯವಸ್ಥೆ ಮಾಡಲಾಗಿತ್ತು. ಈ ರೇವ್ ಪಾರ್ಟಿ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಹಾಸನ ಎಸ್ಪಿ ಶ್ರೀನಿವಾಸ ಗೌಡ ಎ.11 ರಂದು ನಸುಕಿನ ಜಾವ 50ಕ್ಕೂ ಹೆಚ್ಚು ಪೊಲೀಸ್ ಸಿಬಂದಿಯೊಂದಿಗೆ ದಾಳಿ ನಡೆಸಿದ್ದರು. ಅಲ್ಲದೆ ಪಾರ್ಟಿಯ ಅಮಲಿನಲ್ಲಿದ್ದ 131 ಮಂದಿಯನ್ನು ವಶಕ್ಕೆ ಪಡೆದಿದ್ದರು. ಸ್ಥಳದಲ್ಲಿ ಮದ್ಯ,ಮಾದಕ ವಸ್ತುಗಳು ಪತ್ತೆಯಾದ ಕಾರಣ ಎಲ್ಲರ ಬ್ಲಡ್ ಸ್ಯಾಂಪಲ್ ತಪಾಸಣೆಗೆ ಕಳುಹಿಸಿ ಇತರರನ್ನು ಬಿಡುಗಡೆಗೊಳಿಸಿದ್ದರು. ರೇವ್ ಪಾರ್ಟಿಯಲ್ಲಿ ಪಾಲ್ಗೊಳ್ಳುವುದಕ್ಕೆ ಎಂಟ್ರಿ ಫೀಸ್ ಸೇರಿದಂತೆ ಸದಸ್ಯರ ಬರುವಿಕೆಯನ್ನು ದೃಢಪಡಿಸುವುದು ಎಲ್ಲವೂ ಆನ್ ಲೈನಲ್ಲೇ ನಡೆದಿತ್ತು. ಎಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿದೆ ಎನ್ನೋದನ್ನು ಕೂಡ ಕೊನೆಕ್ಷಣದ ವರೆಗೂ ನಿಗೂಢ ಆಗಿಯೇ ಇರಿಸಲಾಗಿತ್ತು. ಹತ್ತಾರು ಕಾರು, ದ್ವಿಚಕ್ರ ವಾಹನಗಳಲ್ಲಿ ಸದಸ್ಯರು ಬಂದಿದ್ದರು. ಅಲ್ಲಿ ಸೇರಿದ್ದವರಲ್ಲಿ ಉಡುಪಿ, ಮಣಿಪಾಲ, ಮಂಗಳೂರು ಮತ್ತು ಬೆಂಗಳೂರಿನ ಮಂದಿಯೇ ಹೆಚ್ಚಿದ್ದರು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!