ಕಾಪು: ತಲೆಮರೆಸಿಕೊಂಡಿದ್ದ ಕೊಲೆ ಪ್ರಕರಣದ ಆರೋಪಿಯ ಬಂಧನ

ಉಡುಪಿ, ಎ.16 (ಉಡುಪಿ ಟೈಮ್ಸ್ ವರದಿ): ಕಾಪುವಿನಲ್ಲಿ 2000ರ ಡಿ.4 ರಂದು ನಡೆದ ಕರಂದಾಡಿ ಗುತ್ತು ಜಯರಾಮ ಶೆಟ್ಟಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಗಳ ಪೈಕಿ ಒಬ್ಬನನ್ನು ಇಂದು ಕಾಪು ಪೊಲೀಸರು ಬಂಧಿಸಿದ್ದಾರೆ.

ಇಲಿಯಾಸ್ ಯಾನೆ ಮಹಮ್ಮದ್ ಹಸನ್ (45) ಬಂಧಿತ ಆರೋಪಿ. ಪ್ರಕರಣಕ್ಕೆ ಸಂಬಂಧಿಸಿ 2007 ರಿ0ದ ಈತ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಅಲ್ಲದೆ  ಮಹಮ್ಮದ್ ರಫೀಕ್ ಎಂಬ ಹೆಸರಿನ  ನಕಲಿ ಪಾಸ್ ಪೋರ್ಟ್ ನಿಂದ ಸೌದಿ ಅರೇಬಿಯಕ್ಕೆ ಹೋಗಿ ಅಲ್ಲಿ ತಲೆಮರೆಸಿಕೊಂಡಿದ್ದ.

ಈತನ ವಿರುದ್ದ ಉಡುಪಿ ಜಿಲ್ಲಾ ಸತ್ರ ನ್ಯಾಯಾಲಯವು ವಾರಂಟ್ ಹೊರಡಿಸಿತ್ತು. ಸದ್ಯ ಆರೋಪಿ ಇರುವಿಕೆ ಬಗ್ಗೆ ಕಾಪು ಠಾಣಾ ವಾರಂಟು ಸಿಬ್ಬಂದಿ ಸುಧಾಕರ ಭಂಡಾರಿ, ರಫೀಕ್ , ಸಂದೇಶ್ ಭಂಡಾರಿ ಅವರು ಮಾಹಿತಿ ಸಂಗ್ರಹಿಸಿ ಇಂದು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

2000 ಡಿ.4 ರಂದು ರಾತ್ರಿ ವೇಳೆ ಉದಯ ಶೆಟ್ಟಿ ಯಾನೆ ದಾಡೆ ಉದಯ ಎಂಬವನು ಸುನಿಲ್ ಶೆಟ್ಟಿ, ಇಲಿಯಾಸ್ ಯಾನೆ ಮಹಮ್ಮದ್ ಹಸನ್ ಮತ್ತು ಅಬೂಬಕ್ಕರ್ ಸಿದ್ದಿಕ್ ಎಂಬವರೊಂದಿಗೆ ಸೇರಿ ತನ್ನ ಅಣ್ಣ ಮಜೂರು ಕರಂದಾಡಿ ಗುತ್ತು ಜಯರಾಮ ಶೆಟ್ಟಿ ಅವರನ್ನು ಅವರ ಮನೆಯಲ್ಲಿಯೇ ಕೊಲೆ ಮಾಡಿದ್ದ. ಈ ಬಗ್ಗೆ ಅಂದಿನ ಶಿರ್ವಾ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆದು ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿತ್ತು. ಆ ಅವಧಿಯಲ್ಲಿ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. 

Leave a Reply

Your email address will not be published. Required fields are marked *

error: Content is protected !!