ಬಾನಂಗಳದಲ್ಲಿ ಎ.17 ರಂದು ಚಂದ್ರನೊಂದಿಗೆ ಮಂಗಳ ಗ್ರಹ ಗೋಚರ

ಉಡುಪಿ, ಎ.16(ಉಡುಪಿ ಟೈಮ್ಸ್ ವರದಿ): ಬಾನಂಗಳದಲ್ಲಿ ಎ.17 ರಂದು ಚಂದ್ರನೊಂದಿಗೆ ಮಂಗಳ ಗ್ರಹ ಗೋಚರಿಸಲಿದೆ ಎಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ಮಾಹಿತಿ ನೀಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸಂಘ ಎ.17ರ ಸಂಜೆ 5 ಗಂಟೆ ಸುಮಾರಿಗೆ ಆಕಾಶವನ್ನು ಗಮನಿಸಿದರೆ, ಚಂದ್ರನಿಗೆ ಬಹಳ ಹತ್ತಿರದಲ್ಲಿ ಹೊಳೆಯುವ ಒಂದು ಸಣ್ಣ ಚುಕ್ಕಿಯಂತೆ ಮಂಗಳಗ್ರಹ ಅಥವಾ ಕೆಂಪು ಗ್ರಹ ಕಾಣಬಹುದಾಗಿದೆ. ಸಮಯ ಕಳೆದಂತೆ, ಕೆಲವೇ ನಿಮಿಷಗಳಲ್ಲಿ, ಕೆಂಪು ಗ್ರಹವು ಆಕಾಶದಲ್ಲಿ ಎಲ್ಲಿಯೂ ಕಾಣಿಸದೆ ಇದ್ದಕ್ಕಿದ್ದಂತೆ ಕಣ್ಮರೆಯಾಗುತ್ತದೆ. ಇದಕ್ಕೆ ಕಾರಣ ಚಂದ್ರನು ಮಂಗಳ ಗ್ರಹವನ್ನು ಆವರಿಸುವುದಾಗಿದೆ. ವಿಶೇಷ ಅಂದ್ರೆ ಈ ಬಾರಿಯ ಈ ವಿದ್ಯಮಾನ ಭಾರತೀಯರಿಗೆ ಮಾತ್ರ ಕಾಣಲಿದೆ .

ಚಂದ್ರನು ಭೂಮಿಗೆ ಹತ್ತಿರದಲ್ಲಿ ಹಾಗೂ ಅರ್ಧ ಡಿಗ್ರಿ ಅಗಲದಲ್ಲಿ ಪ್ರತೀ ರಾತ್ರಿಯು ಆಕಾಶದಾದ್ಯಂತ ಚಲಿಸುತ್ತಾನೆ. ಈ ಪಥದಲ್ಲಿ, ಚಂದ್ರನು ನಕ್ಷತ್ರದ ಮುಂದೆ ಹಾದುಹೋಗುವುದು  ಮತ್ತು ಆಚ್ಛಾದಿಸುವುದು  ಅಪರೂಪದ ಸಂದರ್ಭಗಳಾಗಿವೆ. ಅಚ್ಚಾದನೆಯು ಖಗ್ರಾಸ ಸೂರ್ಯಗ್ರಹಣದಂತೆ , ಚಂದ್ರನು ಒಂದು ವಸ್ತುವನ್ನು ಸಂಪೂರ್ಣವಾಗಿ ಆವರಿಸಿ ಆ ವಸ್ತುವು ಆಕಾಶದಲ್ಲಿ ಒಂದು ಒಂದೂವರೆ ಗಂಟೆಗಳ ಕಾಲ ಕಣ್ಮರೆಯಾಗುತ್ತದೆ. ಆ ವಸ್ತುವು ಒಂದು ಬದಿಯಲ್ಲಿ ಕಣ್ಮರೆಯಾಗಿ ಮತ್ತೊಂದು ಕಡೆಯಿಂದ ಕಾಣಿಸಿಕೊಳ್ಳುತ್ತವೆ.

ಪ್ರತೀ ದಿನವೂ ಚಂದ್ರನು ಪೂರ್ವದೆಡೆಗೆ ಚಲಿಸುತ್ತಾನೆ ಹಾಗೂ ಪ್ರತೀ ತಿಂಗಳು ಚಂದ್ರ, ಸೂರ್ಯ ಹಾಗೂ ಗ್ರಹಗಳ ಮೇಲೆ ಅಥಾವಾ ಕೆಳಗೆ ಹಾದುಹೋಗುತ್ತಾನೆ. ಸೂರ್ಯನ ಹತ್ತಿರದಲ್ಲಿ ಹೋಗುವ ದಿನಗಳು   ಅಮಾವಾಸ್ಯೆಯ ದಿನಗಳು ಎಂದು ನಮಗೆ ತಿಳಿದಿದ್ದರೂ, ಈ ಗ್ರಹಗಳಿಗೆ ಬಹಳ ಹತ್ತಿರದಲ್ಲಿ ಹಾದುಹೋದರೆ ಅದನ್ನು  ಈ ಗ್ರಹಗಳೊಂದಿಗೆ ಚಂದ್ರನ ಸಂಯೋಗ ಎಂದು ಕರೆಯಲಾಗುತ್ತದೆ. ಪ್ರತೀ ತಿಂಗಳು ಚಂದ್ರನು ಮಂಗಳ ಗ್ರಹದ ಜೊತೆಗೆ ಅತೀ ಕಡಿಮೆ ಕೋನಾಂತರದಲ್ಲಿ ಹಾದು ಹೋಗುತ್ತಾನೆ, ಭೂಮಿಯಿಂದ ನೋಡಿದರೆ ಇವರೆಡರ ನಡುವೆ ಕೆಲವೇ ಡಿಗ್ರಿಗಳಷ್ಟು ಅಂತರವಿದ್ದಂತೆ ಕಾಣುತ್ತದೆ. ನಾವು ಈ  ಜೋಡಿಯನ್ನು ಭೂಮಿಯಿಂದ ನೋಡುತ್ತಿದ್ದಂತೆ, ಅವುಗಳ ನಡುವಿನ ಅಂತರವು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ.  ಮಂಗಳ ಹಾಗೂ ಚಂದ್ರನ ಸಂಯೋಗದ ಸಮಯದಲ್ಲಿ, ಒಬ್ಬರು ಇದನ್ನು ಎಲ್ಲಿಂದ ಗಮನಿಸುತ್ತಾರೆ ಎಂಬುದರ ಆಧಾರದ ಮೇಲೆ, ಚಂದ್ರನು ಮಂಗಳನ ಮುಂದೆ ಹಾದುಹೋಗುವಂತೆ ಗೋಚರಿಸುತ್ತದೆ ಮತ್ತು ಮಂಗಳ ಗ್ರಹಣವನ್ನು ಉಂಟುಮಾಡುತ್ತದೆ, ಇದನ್ನು ನಾವು ಮಂಗಳ ಗ್ರಹದ ಆಚ್ಚಾದನೆ  ಎಂದು ಕರೆಯುತ್ತೇವೆ.

ಕಳೆದ ಕೆಲವು ತಿಂಗಳುಗಳಲ್ಲಿ, ಅಂತಹ ಆಚ್ಚಾದನೆಗಳು ಸಂಭವಿಸಿವೆ, ಆದರೆ ಅವು ಭೂಮಿಯ ಕೆಲವು ಭಾಗಗಳಿಂದ ಮಾತ್ರ ಗೋಚರಿಸುತ್ತವೆ. ಹಿಂದಿನ ಚಂದ್ರನ ಆಚ್ಚಾದನೆಯು  ಕ್ರಮವಾಗಿ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾದಲ್ಲಿ ಗೋಚರಿಸಿತ್ತು  ಆದರೆ  ಈ ತಿಂಗಳ ಚಂದ್ರನ ಆಚ್ಚಾದನೆಯು ದೇಶಾದ್ಯಂತ ಗೋಚರಿಸುತ್ತದೆ. ಸಂಜೆ,  ಆಕಾಶದಲ್ಲಿ ನೀಲಿಬಣ್ಣದ ಚದುರುವಿಕೆಯಿಂದಾಗಿ, ಚಂದ್ರನ ಕಪ್ಪು  ಭಾಗವು ನೀಲಿ ಬಣ್ಣದಲ್ಲಿ ಕಾಣಿಸುತ್ತದೆ ಮತ್ತು ಸಂಜೆ 5 ರ ಸುಮಾರಿಗೆ, ಮಂಗಳ ಗ್ರಹವು ಚಂದ್ರನ ಹಿಂದೆ ಕತ್ತಲೆ ಭಾಗದಲ್ಲಿ ಕಣ್ಮರೆಯಾಗುವುದನ್ನು ಗಮನಿಸಬಹುದು. ಚಂದ್ರನ ಕಪ್ಪು ಭಾಗವು ನೀಲಿ ಬಣ್ಣದ್ದಾಗಿರುವುದರಿಂದ, ಸಂಜೆ 5.08 ರ ಸುಮಾರಿಗೆ (ಉಡುಪಿ ಮತ್ತು ದಕ್ಷಿಣ ಕನ್ನಡ) ಮಂಗಳವು ಆಕಾಶದಿಂದ ಕಣ್ಮರೆಯಾದಂತೆ ಕಾಣುತ್ತದೆ. ಸೂರ್ಯ ಮುಳುಗುತ್ತಾ ಕತ್ತಲೆಯಾದಂತೆ, ಸಂಜೆ 6:55 ರ ಸುಮಾರಿಗೆ, ಕೆಂಪು ಗ್ರಹವು ಚಂದ್ರನ ಪ್ರಕಾಶಮಾನವಾದ ಕಡೆಯಿಂದ ಮತ್ತೆ ಕಾಣಿಸಿಕೊಳ್ಳುತ್ತದೆ, ಅಲ್ಲಿಗೆ ಆಚ್ಛಾದನೆ ಪೂರ್ಣಗೊಳ್ಳುತ್ತದೆ.

ಸೂರ್ಯನ ಸುತ್ತ ಚಂದ್ರ, ಭೂಮಿ ಮತ್ತು ಮಂಗಳ ಗ್ರಹಗಳ ಕಕ್ಷೆಗಳ ಸ್ವರೂಪದಿಂದಾಗಿ, ಈ ಘಟನೆಗಳು ಅನಿಯಮಿತ ಮಾದರಿಯಲ್ಲಿ ಕಂಡುಬರುತ್ತವೆ. ಇಂಡೋನೇಷ್ಯಾದಂತಹ ದೇಶಗಳಲ್ಲಿ, ಸಮಯದ ವ್ಯತ್ಯಾಸದಿಂದಾಗಿ, ಮಂಗಳನ ಕಣ್ಮರೆ ರಾತ್ರಿ ಕತ್ತಲ  ಆಕಾಶದಲ್ಲಿಯೂ ಗೋಚರಿಸುತ್ತದೆ, ಆದರೆ, ಭಾರತದಲ್ಲಿ ಮಂಗಳ ಗ್ರಹವು ಮರೆಯಾಗುವುದನ್ನು ನೋಡಲು ಬರಿಗಣ್ಣಿನಿಂದ ಕಷ್ಠಸಾಧ್ಯ. ಆದರೆ ಮಂಗಳ ಗ್ರಹವು ಚಂದ್ರನ ಇನ್ನೊಂದು ಬದಿಯಿಂದ ಕಾಣಿಸಿಕೊಳ್ಳುವುದನ್ನು ನೋಡಬಹುದು. ಈ ವಿದ್ಯಮಾನವನ್ನು ನೀವು ಈಗ ನೋಡದಿದ್ದರೆ ಇನ್ನು ಸದ್ಯಕ್ಕೆ ಚಂದ್ರನು ಮಂಗಳ ಗ್ರಹವನ್ನು ಆಚ್ಚಾದಿಸುವುದಿಲ್ಲ. ಅನೇಕ ಗ್ರಹಗಳನ್ನು ಚಂದ್ರ ಆಚ್ಛಾದಿಸಿದರೂ,  ಯಾವುದೂ ಸಹ ಭಾರತದಲ್ಲಿ ಗೋಚರಿಸುವುದಿಲ್ಲ. ಹಾಗಾಗಿ ತಪ್ಪದೇ ಈ ವಿದ್ಯಮಾನವನ್ನು ವೀಕ್ಷಿಸುವಂತೆ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ತಿಳಿಸಿದೆ. 

Leave a Reply

Your email address will not be published. Required fields are marked *

error: Content is protected !!