ಮದುವೆ, ಸಭೆ ಸಮಾರಂಭಗಳಿಗೆ ಮತ್ತೆ ಷರತ್ತು ವಿಧಿಸಿದ ಸರ್ಕಾರ!

ಬೆಂಗಳೂರು ಎ.16(ಉಡುಪಿ ಟೈಮ್ಸ್ ವರದಿ): ರಾಜ್ಯದಲ್ಲಿ ಕೊರೊನಾ ದಿನೇ ದಿನೇ ವೇಗವಾಗಿ ಹರಡುತ್ತಿದೆ. ಈ ನಿಟ್ಟಿನಲ್ಲಿ ಕೊರೋನಾ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಮದುವೆ, ಸಭೆ ಹಾಗೂ ಸಮಾರಂಭಗಳಿಗೆ ಸರ್ಕಾರ ನಿಯಂತ್ರಣ ಹೇರಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವ ಕುರಿತು ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ತುರ್ತು ಸಭೆ ನಡೆಸಲಾಯಿತು.

ಈ ಸಭೆ ಬಳಿಕ ಮಾತನಾಡಿದ ಆರೋಗ್ಯ ಸಚಿವ ಡಾ. ಸುಧಾಕರ್, ಒಳಾಂಗಣದಲ್ಲಿ ನಡೆಯುವ ಮದುವೆ, ಸಭೆ, ಸಮಾರಂಭಗಳಲ್ಲಿ ನೂರಕ್ಕಿಂತ ಅಧಿಕ ಜನ ಸೇರುವಂತಿಲ್ಲ. ಅದೇ ರೀತಿ ಹೊರಗಡೆ ನಡೆಯುವ ಕಾರ್ಯಕ್ರಮಗಳಲ್ಲಿ 200 ಜನಕ್ಕೆ ಸೀಮಿತ ಗೊಳಿಸಲಾಗಿದೆ ಎಂದು ತಿಳಿಸಿದರು.

ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚು ಹಾಸಿಗೆಗಳನ್ನು ಕೊರೋನಾಗೆ ಮೀಸಲಿಡಲು ಸೂಚಿಸಲಾಗಿದೆ. ಖಾಸಗಿ ಆಸ್ಪತ್ರೆಗಳು ಕೂಡ ಹಾಸಿಗೆ ಮೀಸಲಿಡದಿದ್ದರೆ ಗಂಭೀರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
 
ಕೋವಿಡ್ ನಿಯಂತ್ರಣ ಸಂಬಂಧ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, 400ಕ್ಕೂ ಹೆಚ್ಚು ವೈದ್ಯರನ್ನು ವೈದ್ಯಕೀಯ ಶಿಕ್ಷಣ ಇಲಾಖೆಯು ಆರೋಗ್ಯ ಇಲಾಖೆಗೆ ನೀಡಿದೆ. ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯನ್ನು ಸಾರಿ ಹಾಗೂ ಐಎಲ್‍ಐ ಗೆ ಮೀಸಲಿಡಲು ತೀರ್ಮಾನಿಸಲಾಗಿದೆ. ವಿಕ್ಟೋರಿಯಾದಲ್ಲಿ 300 ಹಾಸಿಗೆ ಕೋವಿಡ್ ಗೆ ಮೀಸಲಿದ್ದು, ಎರಡು ದಿನದೊಳಗೆ 500ಕ್ಕೆ ಏರಿಸಲು ಸೂಚಿಸಲಾಗಿದೆ. ಬೌರಿಂಗ್ ನಲ್ಲಿ 300 ಹಾಸಿಗೆ, ಚರಕ ಆಸ್ಪತ್ರೆಯಲ್ಲಿ ಎರಡು ದಿನದೊಳಗೆ 150 ಹಾಸಿಗೆ, ಘೋಷಾ ಆಸ್ಪತ್ರೆಯಲ್ಲಿ 100 ಹಾಸಿಗೆ, ಕೆ.ಸಿ ಜನರಲ್ ನಲ್ಲಿ 100 ಹಾಸಿಗೆ ಕೋವಿಡ್ ಗೆ ಮೀಸಲಿಡಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಖಾಸಗಿ ಆಸ್ಪತ್ರೆಗಳಿಗೆ ಸೂಚನೆ
ಕೋವಿಡ್ ಗೆ ಹಾಸಿಗೆ ಮೀಸಲಿಡಲು ಖಾಸಗಿ ಆಸ್ಪತ್ರೆಗಳಿಗೆ ಈಗಾಗಲೇ ಮನವಿ ಮಾಡಲಾಗಿದೆ. ಕಳೆದ 15 ದಿನಗಳಿಂದ ಕೋರುತ್ತಿದ್ದರೂ ಕೆಲವು ಆಸ್ಪತ್ರೆಗಳು 15-20% ಹಾಸಿಗೆ ಮಾತ್ರ ನೀಡಿವೆ. ಇನ್ನು ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಲಿದೆ. ಖಾಸಗಿ ಆಸ್ಪತ್ರೆಗಳು ಎಚ್ಚೆತ್ತುಕೊಳ್ಳದಿದ್ದರೆ, ಕಳೆದ ವರ್ಷದಂತೆಯೇ ಗಂಭೀರ ಕ್ರಮ ಕೈಗೊಳ್ಳಬೇಕಾಗುತ್ತದೆ. ನಾನ್ ಕೋವಿಡ್ ರೋಗಿಗಳಲ್ಲಿ ತುರ್ತು ಇರುವವರಿಗೆ ಮಾತ್ರ ಚಿಕಿತ್ಸೆ ನೀಡಬೇಕು. ಕೋವಿಡ್ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಗದಿದ್ದರೆ ಸರ್ಕಾರ ಸುಮ್ಮನಿರಲು ಸಾಧ್ಯವಿಲ್ಲ. ಆದರೂ ಈಗ ಖಾಸಗಿ ಆಸ್ಪತ್ರೆಗಳು ಸರ್ಕಾರದೊಂದಿಗೆ ನಿಲ್ಲಬೇಕು ಎಂದು ಮನವಿ ಮಾಡುತ್ತೇನೆ ಎಂದರು. ಹೋಟೆಲ್ ಗಳಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಬೇಕು. ಕಾರ್ಪೊರೇಟ್ ಆಸ್ಪತ್ರೆಗಳು ಈ ವ್ಯವಸ್ಥೆ ಮಾಡಬೇಕು. ಗಂಭೀರ ರೋಗಿಗಳಿಗೆ ಮಾತ್ರ ಆಸ್ಪತ್ರೆಗೆ ದಾಖಲಿಸಬೇಕು ಎಂದು ಸೂಚಿಸಲಾಗಿದೆ ಎಂದರು.

ಸಿಎಂಗೆ ವರದಿ
ಕೋವಿಡ್ ಹೆಚ್ಚಳ ಅಂದಾಜು, ಕೈಗೊಳ್ಳಬೇಕಾದ ಕ್ರಮಗಳು ಮೊದಲಾದವುಗಳನ್ನೊಳಗೊಂಡಂತೆ ತಾಂತ್ರಿಕ ಸಲಹಾ ಸಮಿತಿಯು ವರದಿ ನೀಡಲಿದೆ. ಇದನ್ನು ಮುಖ್ಯಮಂತ್ರಿಗಳಿಗೆ ನೀಡಿದ ಬಳಿಕ ಚರ್ಚೆಯಾಗಲಿದೆ. ನಂತರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದರು. ಚಿತಾಗಾರಗಳ ಸಮಸ್ಯೆ ಸಂಬಂಧ ಬಿಬಿಎಂಪಿ ಆಯುಕ್ತರೊಂದಿಗೆ ಚರ್ಚಿಸಿದ್ದೇನೆ. ನಿನ್ನೆ 14-15 ಸಾವು ಸಂಭವಿಸಿದೆ. ಅದು ಕೋವಿಡ್ ಸಾವಾಗಿರುವುದರಿಂದ ಒಂದೇ ಚಿತಾಗಾರಕ್ಕೆ ಕಳುಹಿಸಲಾಗಿದೆ. ಇದರಿಂದಾಗಿ ದಟ್ಟಣೆ ಉಂಟಾಗಿದೆ. ಬೇರೆ ಬೇರೆ ಕಡೆ ಕಳುಹಿಸಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಪಿಜಿ ವ್ಯಾಸಂಗ ಮಾಡಿದವರು ಒಂದು ವರ್ಷ ಕಡ್ಡಾಯ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸಬೇಕೆಂದು ನಿಯಮ ಇದೆ. ಕೆಲವರು ಕೋರ್ಟ್ ಮೊರೆ ಹೋಗಿದ್ದಾರೆ. ಆದರೆ ಸರ್ಕಾರ ವಿದ್ಯಾರ್ಥಿಗಳ ಪರವಾಗಿ ನಿರ್ಧಾರ ಕೈಗೊಂಡಿದೆ. ನೇಮಕ ಮಾಡುವವರೆಗೂ ಬೇರೆ ಕಡೆ ಕೆಲಸ ಮಾಡಲು ಅವಕಾಶ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ. ಕಾನೂನು ಇಲಾಖೆಯಿಂದ ಕೂಡ ಸಮ್ಮತಿ ಪಡೆಯಲು ಸೂಚಿಸಲಾಗಿದೆ ಎಂದರು.

ತುರ್ತು ಪರಿಸ್ಥಿತಿಯಲ್ಲಿ ಖಾಸಗಿ ಆ್ಯಂಬುಲೆನ್ಸ್ ಗಳು ಜನರಿಂದ ದುಡ್ಡು ವಸೂಲಿ ಮಾಡಿದರೆ ಶಿಸ್ತು ಕ್ರಮ
ತುರ್ತು ಪರಿಸ್ಥಿತಿಯಲ್ಲಿ ಖಾಸಗಿ ಆ್ಯಂಬುಲೆನ್ಸ್ ಜನರಿಂದ ದುಡ್ಡು ವಸೂಲಿ ಮಾಡಿದರೆ ಶಿಸ್ತು ಕ್ರಮ ಜರುಗಿಸಲಾಗುವುದು, ಅಂತಹವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ಹೆಣದ‌ ಮೇಲೆ ಶೋಷಣೆ ಸರಿಯಲ್ಲ. ಖಂಡಿತವಾಗಿ ಖಾಸಗಿ ಆ್ಯಂಬ್ಯಲೆನ್ಸ್‌ದಾರರ ವಿರುದ್ಧ ಕ್ರಮಜರುಗಿಸಲಾಗುವುದು. ಹಾಗೇನಾದರೂ ಖಾಸಗಿಯವರು ವಸೂಲಿ ಮಾಡಿದರೆ ಪೊಲೀಸರಿಗೆ ದೂರು ನೀಡಬೇಕು. ಯಾರು ಕೂಡ ಇಂತಹ ಕೆಲಸ‌ ಮಾಡಬಾರದು. ಕೋವಿಡ್ ನಂತಹ ಕೆಟ್ಟ ಸಂದರ್ಭ ಸಮಯದಲ್ಲಿ ಅಮಾನವೀಯ ನಡವಳಿಕೆ ಸರಿಯಲ್ಲ ಎಂದರು.

Leave a Reply

Your email address will not be published. Required fields are marked *

error: Content is protected !!