ಮಹಾ ಕುಂಭ ಮೇಳ: 5 ದಿನದಲ್ಲಿ 1700 ಮಂದಿಗೆ ಕೊರೋನಾ ಸೋಂಕು
ಹರಿದ್ವಾರ: ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ಕೇವಲ 5 ದಿನಗಳ ಅಂತರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1700ಕ್ಕೆ ಏರಿಕೆಯಾಗಿದೆ.
ಹರಿದ್ವಾರ ಕುಂಭಮೇಳದಲ್ಲಿ ಏಪ್ರಿಲ್ 10 ರಿಂದ 14 ರವರೆಗೆ ಒಟ್ಟು 1,701 ಯಾತ್ರಾರ್ಥಿಗಳು ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ. ವಿಶ್ವದ ಅತಿದೊಡ್ಡ ಧಾರ್ಮಿಕ ಕೂಟಗಳಲ್ಲಿ ಒಂದಾಗಿರುವ ಕುಂಭಮೇಳದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಐದು ದಿನಗಳ ಅವಧಿಯಲ್ಲಿ ಆರ್ಟಿಪಿಸಿಆರ್ ಮತ್ತು ರಾಪಿಡ್ ಆಂಟಿಜೆನ್ ಟೆಸ್ಟ್ ವರದಿಗಳ ಅನ್ವಯ ಕುಂಭಮೇಳದಲ್ಲಿ ಪಾಲ್ಗೊಂಡ ಸುಮಾರು 1700ಕ್ಕೂ ಅಧಿಕ ಯಾತ್ರಾರ್ಥಿಗಳು ಸೋಂಕಿಗೆ ತುತ್ತಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಪೈಕಿ ವಿವಿಧ ಅಖಡ (ತಪಸ್ವಿ ಗುಂಪುಗಳು)ಗೆ ಸೇರಿದ ಸ್ವಾಮೀಜಿಗಳು ಕೂಡ ಸೇರಿದ್ದಾರೆ. ಹರಿದ್ವಾರದಿಂದ ದೇವಪ್ರಯಾಗ್ ವರೆಗೂ ಕೋವಿಡ್ ಪರೀಕ್ಷಾ ಕೇಂದ್ರಗಳನ್ನು ವಿಸ್ತರಿಸಲಾಗಿದೆ ಎಂದು ಹರಿದ್ವಾರ ಮುಖ್ಯ ವೈದ್ಯಕೀಯ ಅಧಿಕಾರಿ ಶಂಭು ಕುಮಾರ್ ಝಾ ಗುರುವಾರ ತಿಳಿಸಿದ್ದಾರೆ.
ಇದಲ್ಲದೆ ಇನ್ನೂ ಹೆಚ್ಚಿನ ಆರ್ಟಿ-ಪಿಸಿಆರ್ ಪರೀಕ್ಷಾ ವರದಿಗಳಿಗಾಗಿ ಕಾಯಲಾಗುತ್ತಿದ್ದು, ಹೀಗಾಗಿ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಭೀತಿ ಆರಂಭವಾಗಿದೆ.
ಹರಿದ್ವಾರ, ಟೆಹ್ರಿ ಮತ್ತು ಡೆಹ್ರಾಡೂನ್ ಜಿಲ್ಲೆಗಳಲ್ಲಿ, ಹೃಷಿಕೇಶ ಸೇರಿದಂತೆ ಕುಂಭಮೇಳ ವ್ಯಾಪ್ತಿ 670 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿದೆ. ಏಪ್ರಿಲ್ 12 ರಂದು ಸೋಮವತಿ ಅಮಾವಾಸ್ಯೆ ಮತ್ತು ಏಪ್ರಿಲ್ 14 ರಂದು ನಡೆದ ಮೇಶ್ ಸಂಕ್ರಾಂತಿಯ ಸಂದರ್ಭದಲ್ಲಿ ನಡೆದ ಕೊನೆಯ ಎರಡು ಶಾಹಿ ಸ್ನಾನಗಳಲ್ಲಿ (ಶಾಹಿ ಸ್ನಾನ್) ಭಾಗವಹಿಸಿದ 48.51 ಲಕ್ಷ ಜನರಲ್ಲಿ ಬಹುಪಾಲು ಜನರು ಮಾಸ್ಕ್ ಗಳನ್ನು ಧರಿಸದೇ ಇರುವುದು ಮತ್ತು ಸಾಮಾಜಿಕ ಅಂತರ ಪಾಲನೆ ಮಾಡದೇ ಇರುವುದು ಮುಂತಾದ ಕೋವಿಡ್ ಮಾನದಂಡಗಳನ್ನು ಬಹಿರಂಗವಾಗಿ ಉಲ್ಲಂಘಿಸಿದ್ದು ಕಂಡುಬಂದಿತ್ತು.
ಲಕ್ಷಾಂತರ ಮಂದಿ ಏಕಕಾಲದಲ್ಲಿ ಸೇರಿದ್ದರಿಂದ ಪೊಲೀಸರು ಕೂಡ ಪರಿಣಾಮಕಾರಿಯಾಗಿ ಕೋವಿಡ್ ನಿರ್ಬಂಧನೆಗಳನ್ನು ಪಾಲನೆ ಮಾಡಲು ಸಾಧ್ಯವಾಗಿರಲಿಲ್ಲ. ಇದೂ ಕೂಡ ಸೋಂಕು ಉಲ್ಬಣಕ್ಕೆ ಕಾರಣವಾಗಿತ್ತು.
ಕುಂಭಮೇಳ ಸ್ಥಗಿತವಿಲ್ಲ: ಉತ್ತರಾಖಂಡ ಸರ್ಕಾರ
ಸೋಂಕಿನ ಪ್ರಕರಣ ಹೆಚ್ಚಳದ ಹಿನ್ನಲೆ ಹರಿದ್ವಾರ ಕುಂಭಮೇಳದ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನಲೆ ಇನ್ನೆರಡು ದಿನಗಳಲ್ಲಿ ಕುಂಭಮೇಳವನ್ನು ಮುಕ್ತಾಯಗೊಳಿಸುವ ಕುರಿತು ಚಿಂತನೆ ನಡೆಸಲಾಗಿದೆ ಎನ್ನಲಾಗಿತ್ತು. ಆದರೆ, ಇವುಗಳನ್ನು ಅಲ್ಲಗಳೆದಿರುವ ಅಧಿಕಾರಿಗಳು, ನಿಗದಿಯಂತೆ ಕುಂಭಮೇಳ ಮುಂದುವರೆಯಲಿದೆ. ಏ. 30ರವರೆಗೆ ಕುಂಭ ಮೇಳೆ ನಡೆಯಲಿದ್ದು, ಎರಡು ವಾರ ಮುಂಚೆಯೇ ಮುಗಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ಕುಂಭ ಮೇಳ ಉಸ್ತುವಾರಿ ಹೊತ್ತಿರುವ ಹರಿದ್ವಾರ ಡಿಸ್ಟ್ರಿಕ್ ಮ್ಯಾಜಿಸ್ಟ್ರೇಟರ್ ದೀಪಕ್ ರಾವತ್, ಸಾಮಾನ್ಯವಾಗಿ ಜನವರಿಯಲ್ಲಿ ಆರಂಭವಾಗುತ್ತಿದ್ದ ಕುಂಭ ಮೇಳವನ್ನು ಕೊರೋನಾ ಸೋಂಕಿನ ಪರಿಸ್ಥಿತಿ ಗಮನಿಸಿ ಈ ಬಾರಿ ಏಪ್ರಿಲ್ನಲ್ಲಿ ನಿಗದಿಸಲಾಗಿದೆ. ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆ ಈ ಅವಧಿಯನ್ನು ಕಡಿಮೆಗೊಳಿಸುವ ಕುರಿತು ಕೇಂದ್ರದಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ