ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಕೈಜೋಡಿಸಿ: ಯಶ್‌ಪಾಲ್ ಸುವರ್ಣ

ಮಂಗಳೂರು: ಭಾರತ ಸರಕಾರದ LIANC ಪ್ರಾದೇಶಿಕ ತರಬೇತಿಕೇಂದ್ರ ಬೆಂಗಳೂರು, ರಾಷ್ಟ್ರೀಯ ಸಹಕಾರಿಅಭಿವೃದ್ದಿ ನಿಗಮ, ಮೀನುಗಾರಿಕಾ ಇಲಾಖೆ, ಮೀನುಗಾರಿಕಾ ಸಚಿವಾಲಯ, ಪಶುಸಂಗೋಪನೆ ಮತು ಡೈರಿ ಹಾಗೂ ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಬಗ್ಗೆ ಆಯೋಜಿಸಿದ್ದ ಒಂದು ದಿನದ ತರಬೇತಿ ಶಿಬಿರವನ್ನು ಫೆಡರೇಷನ್ ಅಧ್ಯಕ್ಷರಾದ ಯಶ್‌ಪಾಲ್ ಸುವರ್ಣ ಉಧ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕರಾವಳಿ ಕರ್ನಾಟಕದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವಹಿಸುವ ಮೀನುಗಾರಿಕೆಗೆ ಶಕ್ತಿತುಂಬುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಮಹತ್ವದ ಪಾತ್ರವಹಿಸಲಿದೆ. ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸದಸ್ಯ ಸಹಕಾರಿ ಸಂಘಗಳ ಪದಾಧಿಕಾರಿಗಳು ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಸಹಕರಿಸಿ ಮೀನುಗಾರಿಕೆಯ ಸಮಗ್ರ ಅಭಿವೃದ್ಧಿಗೆ ಕೈಜೋಡಿಸುವಂತೆ ತಿಳಿಸಿದರು.

ಫೆಡರೇಶನಿನ ಪ್ರಧಾನ ಕಛೇರಿಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮೀನುಗಾರಿಕಾ ಇಲಾಖೆ ನಿರ್ದೇಶಕರಾದ ಶ್ರೀ ರಾಮಾಚಾರ್ಯ, ಮೀನುಗಾರಿಕಾ ಮತ್ತು ಬಂದರು ಇಲಾಖೆ ಜಂಟಿ ನಿರ್ದೇಶಕರಾದ ತಿಪ್ಪೇಸ್ವಾಮಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಪ್ರದೀಪ್ ಡಿ’ಸೋಜಾ ಉಪಸ್ಥಿತರಿದ್ದರು. ಪ್ರ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಮತ್ತು ರಾಷ್ಟ್ರೀಯ ಸಹಕಾರಿ ಅಭಿವೃದ್ದಿ ನಿಗಮದ ಯೋಜನೆಗಳ ಬಗ್ಗೆ ಪ್ರಾದೇಶಿಕ ತರಬೇತಿ ಕೇಂದ್ರ ಬೆಂಗಳೂರು ಇದರ ಸಲಹೆಗಾರರಾದ ಶ್ರೀ ಜೆ.ಪಿ ಸುಬ್ರಮಣ್ಯ ಮಾಹಿತಿ ನೀಡಿದರು. ತರಬೇತಿ ಶಿಬಿರದಲ್ಲಿ ಫೆಡರೇಶನಿನ ಸದಸ್ಯ ಸಹಕಾರಿ ಸಂಘಗಳ ಪದಾಧಿಕಾರಿಗಳು ಹಾಗೂ ಫೆಡರೇಶನಿನ ನಿರ್ದೇಶಕರು ಭಾಗವಹಿಸಿದ್ದರು.

ರಾಷ್ಟ್ರೀಯ ಸಹಕಾರಿ ಅಭಿವೃದ್ದಿ ನಿಗಮದ ಪ್ರಾದೇಶಿಕ ನಿರ್ದೇಶಕರಾದ ಶ್ರೀಧರನ್. ಕೆ. ಎನ್. ಪ್ರಸ್ತಾವನೆಯೊಂದಿಗೆ ಸ್ವಾಗತಿಸಿ, ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ವ್ಯವಸ್ಥಾಪಕ ನಿರ್ದೇಶಕರಾದ ಹರೀಶ್ ಕುಮಾರ್ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!