ಸಿಬಿಎಸ್‌ಇ 10 ನೇ ತರಗತಿ ಪರೀಕ್ಷೆ ರದ್ದು, 12 ನೇ ತರಗತಿ ಪರೀಕ್ಷೆಗಳು ಮುಂದೂಡಿಕೆ
ನವದೆಹಲಿ: ದೇಶಾದ್ಯಂತ ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ [ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ)] ಹತ್ತನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ ಮತ್ತು ಹನ್ನೆರಡನೇ ತರಗತಿ ಪರೀಕ್ಷೆಯನ್ನು ಮುಂದೂಡಿಕೆ ಮಾಡಿದೆ.
ಮಂಡಳಿಯು ನಿಗದಿಪಡಿಸಿದ ಮಾನದಂಡದ ಆಧಾರದ ಮೇಲೆ ಹತ್ತನೇ ತರಗತಿಯ ವಿದ್ಯಾರ್ಥಿಗಳ ಫಲಿತಾಂಶವನ್ನು ನೀಡಲಾಗುವುದು ಮತ್ತು ಹನ್ನೆರಡನೇ ತರಗತಿಯ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು.
“10ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ. ಮಂಡಳಿಯು ವಸ್ತುನಿಷ್ಠ ಮಾನದಂಡದ ಆಧಾರದ ಮೇಲೆ ಫಲಿತಾಂಶವನ್ನು ಸಿದ್ಧಪಡಿಸಲಿದೆ” ಎಂದು ಶಿಕ್ಷಣ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಅಂಕಗಳ ಬಗ್ಗೆ ಅಸಮಾಧಾನವಿರುವ ಯಾವುದೇ ಅಭ್ಯರ್ಥಿಗೆ ಪರಿಸ್ಥಿತಿ ಅನುಕೂಲಕರವಾದಾಗ ಪರೀಕ್ಷೆಗಳಿಗೆ ಕುಳಿತುಕೊಳ್ಳಲು ಅವಕಾಶ ನೀಡಲಾಗುವುದು. 12 ನೇ ತರಗತಿ ಪರೀಕ್ಷೆಗಳನ್ನು ಮುಂದೂಡಲಾಗಿದ್ದು ಜೂನ್ 1 ರ ನಂತರ ಪರಿಸ್ಥಿತಿಯ ಪರಿಶೀಲನೆ ನಡೆಸಿ ಪರೀಕ್ಷೆಗಳನ್ನು ನಡೆಸುವ ಮೊದಲು ಕನಿಷ್ಠ 15 ದಿನಗಳ ನೋಟೀಸ್ ನೀಡಲಾಗುತ್ತದೆ.
ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಎರಡನೇ ಅಲೆಯನ್ನು ನಿಯಂತ್ರಿಸಲು ಭಾರತ ಪ್ರಯತ್ನದಲ್ಲಿರುವಾಗ ಈ ನಿರ್ಧಾರ ಹೊರಬಿದ್ದಿದೆ. ಸಿಬಿಎಸ್‌ಇ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಈ ಹಿಂದೆ ಅಭಿಯಾನವನ್ನು ಪ್ರಾರಂಭಿಸಿದ್ದರು. ಮೇ 4 ರಂದು ಪ್ರಾರಂಭವಾಗಲಿರುವ ಬೋರ್ಡ್ ಪರೀಕ್ಷೆಗಳ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಮತ್ತು ಇತರ ಹಿರಿಯ ಶಿಕ್ಷಣ ಅಧಿಕಾರಿಗಳನ್ನು ಭೇಟಿ ಮಾಡಿದ ನಂತರ ಈ ಪ್ರಕಟಣೆ ಹೊರಡಿಸಲಾಗಿದೆ.