ಎಸ್ಸೆಸ್ಸೆಲ್ಸಿ ಪರೀಕ್ಷೆ- ಪರಿಸ್ಥಿತಿ ಅವಲೋಕಿಸಿ ಸೂಕ್ತ ನಿರ್ಧಾರ: ಸುರೇಶ್ ಕುಮಾರ್
ಬೆಂಗಳೂರು: ‘ಸಿಬಿಎಸ್ಇ ರೀತಿಯಲ್ಲಿ ರಾಜ್ಯದಲ್ಲಿಯೂ ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದುಪಡಿಸುವ ಅಥವಾ 12ನೇ ತರಗತಿಯ ಪರೀಕ್ಷೆಗಳನ್ನು ಮುಂದೂಡುವ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ‘ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಜೂನ್ 21ರಿಂದ ಆರಂಭಿಸಲು ಸರ್ಕಾರ ಈಗಾಗಲೇ ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಅವಲೋಕಿಸಿ, ಪರೀಕ್ಷೆಗಳನ್ನು ನಡೆಸುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು’ ಎಂದೂ ಅವರು ಹೇಳಿದ್ದಾರೆ.
ಸಿಬಿಎಸ್ಇ 10ನೇ ತರಗತಿಯ ಬೋರ್ಡ್ ಪರೀಕ್ಷೆ ರದ್ದುಪಡಿಸಲು ಹಾಗೂ 12ನೇ ತರಗತಿಯ ಪರೀಕ್ಷೆಗಳನ್ನು ಮುಂದೂಡಲು ತೀರ್ಮಾನಿಸಿದ ಬೆನ್ನಲ್ಲೆ, ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ಕುರಿತು ಊಹಾಪೋಹಗಳು ಏಳತೊಡಗಿದೆ. ಈ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.