ಕುಂಭ ಮೇಳ: ಮೂಲೆಗುಂಪಾದ ಕೋವಿಡ್ ನಿಯಮಾವಳಿ- 100ಕ್ಕೂ ಹೆಚ್ಚು ಯಾತ್ರಾರ್ಥಿಗಳಿಗೆ ಕೊರೋನಾ ಸೋಂಕು!
ಹರಿದ್ವಾರ: ಹರಿದ್ವಾರದ ಮಹಾ ಕುಂಭಮೇಳದಲ್ಲಿ 100ಕ್ಕೂ ಹೆಚ್ಚು ಯಾತ್ರಾರ್ಥಿಗಳಿಗೆ ಕೊರೋನಾ ಸೋಂಕು ಒಕ್ಕರಿಸಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಸಾಕಷ್ಟು ಮಾಧ್ಯಮಗಳು ಹರಿದ್ವಾರದ ಮಹಾ ಕುಂಭಮೇಳದಲ್ಲಿ ಕೋವಿಡ್ ನಿಯಮಗಳ ಕಡ್ಡಾಯ ಪಾಲನೆಯಾಗದ ಕುರಿತು ಬೆಳಕು ಚೆಲ್ಲಿದ್ದವು. ಇದೀಗ ಅದಕ್ಕೆ ಇಂಬು ನೀಡುವಂತೆ ಬರೊಬ್ಬರಿ 102 ಯಾತ್ರಾರ್ಥಿಗಳು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಹೊರಬಂದಿದೆ.
ಮೂಲಗಳ ಪ್ರಕಾರ ಕುಂಭಮೇಳದಲ್ಲಿ ಪಾಲ್ಗೊಂಡಿದ್ದ 102 ಮಂದಿ ಯಾತ್ರಾರ್ಥಿಗಳು ಮತ್ತು 20 ಮಂದಿ ವೀಕ್ಷಕರಿಗೆ ಸೋಂಕು ಒಕ್ಕರಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕುಂಭ ಮೇಳ ಪ್ರಾಧಿಕಾರದ ಮಾಹಿತಿಗಳ ಪ್ರಕಾರ ಹಾಲಿ ಕುಂಭ ಮೇಳದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಯಾತ್ರಾರ್ಥಿಗಳು ಪಾಲ್ಗೊಂಡಿದ್ದಾರೆ ಎಂದು ಮಾಹಿತಿ ನೀಡಿದೆ. ಇನ್ನು ಕುಂಭ ಮೇಳದಲ್ಲಿ ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದ್ದು, ನಿಯಮಗಳ ಕಡ್ಡಾಯ ಪಾಲನೆಯಾಗುತ್ತಿಲ್ಲ ಎಂದು ಆರೋಪಿಸಲಾಗಿದೆ. ಕುಂಭ ಮೇಳ ಕೂಡ ದೆಹಲಿಯ ನಿಜಾಮುದ್ದೀನ್ ಮರ್ಕಜ್ ನಂತೆ ಅತೀ ಹೆಚ್ಚು ಸೋಂಕಿತರ ಹೊಂದುವ ಭೀತಿ ಇದೆ ಎಂದು ಆತಂಕ ವ್ಯಕ್ತಪಡಿಸಲಾಗುತ್ತಿದೆ.
ಈ ಟೀಕೆಗಳಿಗೆ ತಿರುಗೇಟು ನೀಡಿರುವ ಉತ್ತರಾಖಂಡ ಸಿಎಂ ತಿರಥ್ ಸಿಂಗ್ ರಾವತ್, ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳವನ್ನು ಮುಚ್ಚಿದ ಜಾಗದಲ್ಲಿ ನಡೆಸಿದ ಮತ್ತು ವಿದೇಶಿಯರು ಸಹ ಹಾಜರಾಗಿದ್ದ ನಿಜಾಮುದ್ದೀನ್ ಮಾರ್ಕಜ್ ಗೆ ಹೋಲಿಸಬಾರದು ಎಂದು ಹೇಳಿದ್ದಾರೆ. ‘ಕುಂಭಕ್ಕೆ ಹಾಜರಾಗುವ ಭಕ್ತರು ಹೊರಗಿನವರಲ್ಲ, ನಮ್ಮದೇ ಜನರು. ಕುಂಭ 12 ವರ್ಷಗಳಿಗೊಮ್ಮೆ ಬರುತ್ತದೆ ಮತ್ತು ಲಕ್ಷಾಂತರ ಜನರ ನಂಬಿಕೆ ಮತ್ತು ಭಾವನೆಗಳೊಂದಿಗೆ ಸಂಬಂಧ ಹೊಂದಿದೆ. ಹೀಗಾಗಿ ಮರ್ಕಜ್ ಗೆ ಕುಂಭಮೇಳವನ್ನು ಹೋಲಿಕೆ ಮಾಡಬಾರದು ಎಂದು ತೀರಥ್ ಸಿಂಗ್ ರಾವತ್ ಹೇಳಿದ್ದಾರೆ.