ತಾಂತ್ರಿಕ ಸಲಹಾ ಸಮಿತಿ ಲಾಕ್ಡೌನ್​ಗೆ ಸೂಚಿಸಿಲ್ಲ- ಸದ್ಯಕ್ಕೆ ಲಾಕ್ಡೌನ್​ ಇಲ್ಲ: ಯಡಿಯೂರಪ್ಪ

ಬೆಂಗಳೂರು: ಲಾಕ್ಡೌನ್ ಕುರಿತು ಎದ್ದಿರುವ ಊಹಾಪೋಹಗಳಿಗೆ ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದು, ಸದ್ಯಕ್ಕೆ ಲಾಕ್ಡೌನ್​ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಮತ್ತೆ ಲಾಕ್ಡೌನ್ ಮೊರೆ ಹೋಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಇಂಬು ನೀಡುವಂತೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸಹ ತಾಂತ್ರಿಕ ಸಲಹಾ ಸಮಿತಿ ಲಾಕ್ಡೌನ್ ಮಾಡಲು ಸೂಚಿಸಿದೆ  ಎಂದು ಹೇಳಿದ್ದರು. ಆದರೆ, ಇದೆಲ್ಲವನ್ನೂ ಸ್ಪಷ್ಟವಾಗಿ ನಿರಾಕರಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದಲ್ಲಿ ಸದ್ಯಕ್ಕೆ ಲಾಕ್ಡೌನ್ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಬೀದರ್​ನ ಬಸವಕಲ್ಯಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಕೂಡಾ ಸಲಹಾ ಸಮಿತಿಯಲ್ಲಿ ಇದ್ದೇನೆ. ಯಾರೂ ಲಾಕ್ಡೌನ್​ಗೆ ಸೂಚನೆ ನೀಡಿಲ್ಲ. ಸುಮ್ಮನೇ ತಪ್ಪು ಹೇಳಬೇಡಿ. ಕರ್ನಾಟಕದಲ್ಲಿ ಸದ್ಯಕ್ಕೆ ಲಾಕ್ಡೌನ್ ಮಾಡುವ ಪ್ರಶ್ನೆ ಇಲ್ಲವೇ ಇಲ್ಲ. ಕೊರೊನಾ ತಡೆಯಲು ಜನತೆ ಸಹಕಾರ  ನೀಡಬೇಕು. ಜನರು ಇದನ್ನು ಮರೆತರೆ ಅನಾಹುತ ಆಗಲಿದೆ. ಕೊರೊನಾ ತಡೆ ಬಗ್ಗೆ ಸರ್ವಪಕ್ಷ ಸಭೆಯಲ್ಲಿ ಸಲಹೆ ಪಡೆದು ತೀರ್ಮಾನಿಸುತ್ತೇವೆ. ಏನೇನು ಮಾಡಬೇಕೆಂದು ನಂತರ ನಿರ್ಧರಿಸುತ್ತೇವೆ ಎಂದು ಹೇಳಿದರು. 

ಬಿಎಸ್ ಯಡಿಯೂರಪ್ಪ, ಸರ್ವಪಕ್ಷ ಸಭೆಗೆ ಬರುವುದಿಲ್ಲವೆಂಬ ಡಿ.ಕೆ.ಶಿವಕುಮಾರ್​ ಹೇಳಿಕೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸಭೆ ಕರೆಯಿರಿ ಎಂದು ಅವರೇ ಹೇಳಿದ್ದು ಈಗ ಬರಲ್ಲ ಅಂತಾರೆ. ಸಭೆಗೆ ಕರೆಯುತ್ತೇವೆ, ಬರುವುದು, ಬಿಡುವುದು ಅವರಿಗೆ ಬಿಟ್ಟಿದ್ದು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!