ನೈಟ್ ಕರ್ಫ್ಯೂ ಹಿನ್ನೆಲೆ ಹಾಸನದಲ್ಲಿ ರೇವ್ ಪಾರ್ಟಿ-ಉಡುಪಿ ಮಂಗಳೂರಿನ ಹಲವು ಜೋಡಿ ಪೊಲೀಸ್ ವಶಕ್ಕೆ
ಉಡುಪಿ,ಏ.13(ಉಡುಪಿ ಟೈಮ್ಸ್ ವರದಿ): ರಾಜ್ಯದಾದ್ಯಂತ ಕೊರೋನಾ ಮಿತಿ ಮೀರಿ ಹರಡುತ್ತಿರುವ ಹಿನ್ನೆಲೆ ಹೆಚ್ಚು ಜನರು ಪಾರ್ಟಿಗಳಲ್ಲಿ ಸೇರಬಾರದು ಎಂಬ ಕಾರಣಕ್ಕಾಗಿ ಮುಂಜಾಗೃತಾ ಕ್ರಮವಾಗಿ ನೈಟ್ ಕರ್ಫ್ಯೂ ಜಾರಿಮಾಡಲಾಗಿದೆ. ಆದರೆ ಇದೀಗ ಈ ನೈಟ್ ಕರ್ಫ್ಯೂ ನಡುವೆಯೇ ಹಾಸನದಲ್ಲಿ ರೇವ್ ಪಾರ್ಟಿ ನಡೆದಿರುವುದು ಬಹಿರಂಗಗೊಂಡಿದೆ. ಅದರಲ್ಲೂ ಹಾಸನದಲ್ಲಿ ಆಯೋಜಿಸಿದ ರೇವ್ ಪಾರ್ಟಿಯೊಂದರಲ್ಲಿ ಕರಾವಳಿಯ ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿರುವುದಾಗಿ ಸುದ್ದಿಯೊಂದು ವರದಿಯಾಗಿದೆ.
ರೇವ್ ಪಾರ್ಟಿ ನಡೆಯುತ್ತಿದ್ದ ಬಗ್ಗೆ ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿದ್ದು ಈ ವೇಳೆ ಮಂಗಳೂರು, ಉಡುಪಿ, ಮಣಿಪಾಲ ಸೇರಿದಂತೆ ರಾಜ್ಯದ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕೊರೊನಾ ನೈಟ್ ಕರ್ಫ್ಯೂ ಹೇರಿದ ಹಿನ್ನೆಲೆಯಲ್ಲಿ ರೇವ್ ಪಾರ್ಟಿಗೆ ತೆರಳಿರುವುದು ತಿಳಿದು ಬಂದಿದೆ. ಹಾಸನದ ಆಲೂರು ತಾಲೂಕು ಹೊಂಕರಹಳ್ಳಿ ರೆಸಾರ್ಟ್ನಲ್ಲಿ ಏ.10 ರಂದು ರಾತ್ರಿ ರೇವ್ ಪಾರ್ಟಿ ನಡೆಯುತ್ತಿತ್ತು. ಈ ಬಗ್ಗೆ ಮಾಃಇತಿ ಪಡೆದ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ನೇತೃತ್ವದ ತಂಡ ದಾಳಿ ನಡೆಸಿತ್ತು. ಈ ವೇಳೆ ಮದ್ಯದ ನಶೆಯಲ್ಲಿದ್ದ 130 ಯುವಕ-ಯುವತಿಯರು ಇದ್ದು ಅರೆಬಟ್ಟೆಯಲ್ಲಿರುವುದು ಕಂಡುಬಂದಿದೆ. ಈ ವೇಳೆ ರೆಸಾರ್ಟ್ನಲ್ಲಿ ಮದ್ಯ, ಮಾದಕ ಪದಾರ್ಥವೂ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಪೊಲೀಸ್ ದಾಳಿ ವೇಳೆ ಸಿಕ್ಕಿ ಬಿದ್ದ 131 ಜನರಲ್ಲಿ ಬಹುತೇಕ ಮಂದಿ ಅವಿವಾಹಿತರು ಇದ್ದು, ಪ್ರತಿಯೊಬ್ಬರನ್ನು ವಿಚಾರಣೆ ನಡೆಸಿದಾಗ ಹೆಚ್ಚಿನವರು ಮಂಗಳೂರು, ಬೆಂಗಳೂರು, ಉಡುಪಿ ಮೂಲದವರೆಂದು ತಿಳಿದು ಬಂದಿದೆ. ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದ 134 ಯುವಕ-ಯುವತಿಯರ ಪೈಕಿ 131 ಜನರಿಗೆ ಪೊಲೀಸ್ ಠಾಣೆಯಲ್ಲಿ ಜಾಮೀನು ನೀಡಿ ಬಿಡುಗಡೆಗೊಳಿಸಲಾಗಿದೆ. ಎಸ್ಟೆಟ್ ಮಾಲೀಕ ಗಗನ್, ಬೆಂಗಳೂರು ಮುರುಗೇಶ್ಪಾಳ್ಯ ನಿವಾಸಿ ಸೋನಿ ಮತ್ತು ಬೆಂಗಳೂರು ಬನ್ನೇರುಗಟ್ಟ ನಿವಾಸಿ ಪಂಕಜ್ ರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ತನಿಖೆಗಾಗಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎಂದು ಆಲೂರು ಇನ್ಸ್ಪೆಕ್ಟರ್ ವೆಂಕಟೇಶ್ ತಿಳಿಸಿದ್ದಾರೆ.
ರೇವ್ ಪಾರ್ಟಿ ಆಯೋಜಿಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕವೇ ಮಾಹಿತಿ ರವಾನಿಸಲಾಗುತ್ತದೆ. ಇದಕ್ಕೆ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಮಾತ್ರ ವಾಟ್ಸ್ಯಾಪ್ ಮೂಲಕ ರೇವ್ ಪಾರ್ಟಿ ಲೊಕೇಷನ್ ಕಳುಹಿಸಲಾಗುತ್ತದೆ. ಈ ಪಾರ್ಟಿಗೆ ಬೇರೆಯವರು ಬಾರದಂತೆ ಪ್ರತಿಯೊಬ್ಬರಿಗೂ ಟ್ಯಾಗ್ ನೀಡಲಾಗುತ್ತದೆ. ಇಂತಹ ಪಾರ್ಟಿ ತೀರಾ ಗ್ರಾಮೀಣ, ಕಾಡು ಪ್ರದೇಶ, ಎಸ್ಟೆಟ್ಗಳೊಳಗೆ ಆಯೋಜಿಸಲಾಗುತ್ತಿರುವುದರಿಂದ ಅಧಿಕಾರಿಗಳಿಗೂ ಮಾಹಿತಿ ಸಿಗುವುದಿಲ್ಲ. ಒಂದು ವೇಳೆ ಗೊತ್ತಾದರೂ ದಾಳಿ ವೇಳೆ ತಪ್ಪಿಸಿಕೊಳ್ಳಲು ಸುಲಭವಾಗುತ್ತದೆ.